Wednesday, November 23, 2022

ಬರವಿದೆ ಪದಗಳಿಗೆ

ಬರೆಯಲೊಪ್ಪಿದೆನು
ಬರವಿದೆ ಪದಗಳಿಗೆ

ಬಣ್ಣಿಸಲೆಣಿಸಿದೆ
ಭಾಮಿನಿಯ ಬಿಸಿಯುಸಿರ

ಬಣ್ಣಿಸಲಾಗದೆ ಸೋತಿಯೆನು 
ಬಾಂಧವ್ಯದ ಬಣ್ಣನೆಯ

ನೀ ಬೆಳೆಸಲಿಲ್ಲ

ನೀ ಬೆಳೆಸಲಿಲ್ಲ,
ನಾ ಬೆಳಗಿದೆ...
ನೀ ತುಳಿದೆ,
ನಾ ತಳೆದೆ ಮೂರ್ತರೂಪ...

ಪ್ರಸಾದನ ಪ್ರಾರ್ಥನೆ

ಕನ್ನಡಾಂಬೆಯ ಪಾದಾರವಿಂದಗಳಲ್ಲಿ!

ನಿದ್ರೆಯ ನೈವೇದ್ಯೆಗೈದು 
ನಿನ್ನ ಸೇವೆಯ ಮಾಡಿರುವೆ
ಹರಸು ತಾಯೆ,
ನಮ್ಮಿಪ್ರಯತ್ನಕ್ಕೆ
ಮೂಡದಂತಿರಲಿ
ಯಾವುದೇ ಕಪ್ಪು ಛಾಯೆ

ಮಳೆರಾಯ!

ಮಂಕಾಗದಿರಲಿ ದಿನ-ಮನ
ಮೋಡ-ಮಳೆಯ ಮುತ್ತುಗಳಿಂದ
ಬಿಡುವಿರಲಿ ನಿನ್ನ 
ದಣಿವರಿಯದ ದಿನಚರಿಗಳಿಗೆ

ಸೂರ್ಯ!

ಸೂರ್ಯ ರಶ್ಮಿಯ ಹೊಳೆ
ತೊಳೆದಂತಿರಲಿ ಇಳೆ 
ಮೇಳೈಸುತಿರೆ
ಸಾಹಿತ್ಯ ಬಂದುಬಳಗ

ಸಾಹಿತ್ಯ ಸೇತು - ಕಿರು ಕವಿಗೋಷ್ಠಿ

ಇದು ಬಂದವೋ, ಭಕ್ತಿಯೊ 
ಬಂದಿಸಿದೆ ಎನ್ನ
ನಿಮ್ಮ ಸ್ನೇಹ ಪ್ರೀತಿಗಳಲ್ಲಿ

ಮುಗಿಯುತ್ತದೆ ಮನದ ಬೇಗೆ
ಮಾಗುತ್ತದೆ ಮನಸು
ಮುರಿಯದಿರಲಿ 
ಈ ಮಧುರ ಬಾಂಧವ್ಯ

ಅತ್ಯಾಪ್ತತೆಯ
ಆನಂದ ಅನುಭವಿಸಿದೆ
ಅನುರಣಿಸಲಿ ಅನುದಿನವೂ
ಈ ಸ್ನೆಹಬಂದ

Tuesday, November 15, 2022

ಪ್ರಸಾದನ ಪ್ರಣಾಮಗಳು

ನೀವೆನ್ನ ಸಲಹಿದಿರಿ
ನಾನೆಲ್ಲ ಸಹಿಸಿದೆನು
ನಾವೆಲ್ಲ ಶ್ರಮಿಸಿದೆವು
ಸಾಹಿತ್ಯದಾಶಕ್ತಿ ಸಂಘಟಿಸಿರುವದು ನಮ್ಮೆಲ್ಲರ 

ಪ್ರಶಸ್ತಿ ಪ್ರಶಂಸೆಯಿಂದಾಚೆಗೆ ಬರೆದಿರಿ
ಪೊರೆವಂತೆ ಕಿರು ಕವಿಗೋಷ್ಠಿಯನ್ನ
ತಮ್ಮೆಲ್ಲರ  ಅಮೃತಾಕ್ಷರದಲ್ಲಿ
ಮೂಡಿಹುದು ಸಿರಿಧಾನ್ಯ ಸುಧೆ
ಸೃಷ್ಟಿಸಿರುವದು ಕಿರು ಕಾವ್ಯದಾಮೃತ

ಹೆಜ್ಜೆಗೆಜ್ಜೆಗೆ ಹೆಚ್ಚಿದ ಅನುಭವ 
ದೂಡಿಹುದು ದುಡಿಯಲು ಕಿರು ಸಿರಿಗಾಗಿ
ಸಿರಿಧಾನ್ಯ ಕಾವ್ಯಲಹರಿಗಾಗಿ
ಅಚ್ಚಳಿಯದುಳಿಯಲಿ ಇತಿಹಾಸ ಪುಟಗಳಲಿ
ನಮ್ಮೆಲ್ಲರ ಕಿರು ಕಾವ್ಯ ಸೇವೆ
ಮತ್ತೆ ತಮ್ಮೆಲ್ಲರ ಅಮೃತಾಕ್ಷರದಲಿ, ಎಲ್ಲೆಡೆ ಪಸರಿಸಲಿ

Tuesday, November 8, 2022

ಸಾವಯವ ಕೃಷಿ

ಸಾರಬೇಕಿದೆ ನಾವು ಸಾವಯವ ತತ್ವ
ಬೇಸಾಯದಿ ಪಾಲಿಸೋಣ ಸಾವಯವ ಸತ್ವ
 
ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ
 
ಮರೆತರಂತು ಮಣ್ಣಿನ ಇತಿಹಾಸ
ಸೃಷ್ಟಿಸಲಾಗದು ಮನುಜಮೊಗದಲ್ಲಿ ಮಂದಹಾಸ
 
ಸವಕಳಿ ತಡೆಯಲು ಬದು ನಿರ್ಮಾಣ
ಬದುವಿಲ್ಲದ ಹೊಲ-ಗದ್ದೆಗಳವು ಅಂತರ್ಜಲಕ್ಕೆ ನಿರ್ಯಾಣ
 
ಮಾರಕ ಕೀಟನಾಶಕಗಳು, ರಸಗೊಬ್ಬರಗಳವು ಅಧಿಕ ಖರ್ಚಿಗೆ ದಾರಿ
ಪಾಲಿಸೋಣ ಸಾವಯವ ಸತ್ವ ಆಗದು ಬೇಸಾಯ ದುಭಾರಿ
 
ಸಾವಯವ ಕೃಷಿಯದು ದುಡಿವುದು ಮಣ್ಣಿನ ಬಲವರ್ಧನೆಗೆ
ಬಹು ಬೇಡಿಕೆ ಇರುವುದು ಸಾವಯವ ಬೆಳೆಗಳಿಗೆ
 
ತರಗೆಲೆ, ಕಳೆಗಿಡ ಭೂಮಿಗೆ ಗೊಬ್ಬರ
ಹಾಕದಿರು ನೀ ಮಣ್ಣಲಿ ಕರಗದಿಹ ರಸಗೊಬ್ಬರ
 
ಯುವ ರೈತರೆಲ್ಲರೂ ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ

Sunday, November 6, 2022

ಜ್ಞಾನ ದೀವಿಗೆ

ಜ್ಞಾನ ದೀವಿಗೆ ಇದು ಹಣತೆಯಂತೆ,
ಹಳತಾದರೇನು ಹೊಸತಾದರೇನು,
ನೀಡುವ ಸುಜ್ಞಾನ ಭೋದವಂದೆ! 

ಹಳತೆಂದು ಅನ್ನದಿರು,
ಅದು ಅನುಭವದ ಕಂತೆ,
ಹಳತಾಗಿರುವುದು ಜ್ಞಾನಸುಧೆ  ಹರಿಸಿದಂತೆ!

ಇರಲಿ ಮನೆ ಮನಗಳಲ್ಲಿ,
ಪುಸ್ತಕದ ಮೇಜು, 
ಅದುವೇ ಸುಜ್ಞಾನದ  ಮೋಜು!

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!