Thursday, March 9, 2023

ಗೆಲ್ಲಲೊರಟ ಮನಕೆ

ಬಿದ್ದ ಬೀಜದ ಮೊಳಕೆ
ಹೊಸ ಜೀವಕ್ಕೆ ಒರತೆ
ಚಿಗುರೊಂದು ಹಸಿರಿಗೆ ನಾಂದಿ

ಬರಡಿರಲಿ ಬಿಸಿಲಿರಲಿ
ಬದುಕು ಹಸನಿರಲಿ
ಮೊಳಕೆ-ಚಿಗುರಗಳ ಕನಸುಗಳು ಮೇಳೈಸುತಿರಲಿ

ಗೆಲ್ಲಲೊರಟ ಮನಕೆ
ಬರ ಬಿಸಿಲು ತಂಪಾಗಿ
ಒಣ ಕೊರಡು ಚಿಗುರೊಡೆದು ಆಶಿಸುವುದು ಕಾಣ

Wednesday, March 8, 2023

ಮಹಿಳೆಯೆಂಬ ಮಹಾ ಮಹಿಮೆಗೆ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು

ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಬೆಳಗುತಿರಲಿ ನಿನ್ನ ಬಾಳ ನೌಕೆ

ಮಹಿಳೆಯೆಂಬ ಮಹಾ ಮಹಿಮೆಗೆ, ಮಹಿಳಾ ದಿನಾಚರಣೆಯ ಶುಭಾಶಯಗಳು

Friday, March 3, 2023

ಸೋಲು - ಗೆಲುವು

ಸೋಲೊಂದು ಬಾಯಿಬಡುಕ
ಮುಗ್ಗರಿಸಿದೊಡನೆಯೇ 
ಮುನ್ನುಗ್ಗಿ ಮನೆ ಮಾತಾಗುತ್ತದೆ

ಗೆಲುವೊಂದು ಗೌಣ
ಬಚ್ಚಬಾಯಿಯ ಏಕಾಂಗಿ
ತನ್ನೊಡಲ ಎಣ್ಣೆಹೊಯ್ದು 
ಹಚ್ಚಿದ ದೀಪ 
ಹೆಚ್ಚೆಂದು ಹೇಳಲರಿಯದ ಎಳವ

ಸೋಲಿಗೆ ಸೊಲ್ಲೆತ್ತಿ 
ಸುಳ್ಳೇ ನುಡಿವ ಎಲೆ ಮನವೇ
ಗುದ್ದಾಡಿ ಗೆಲ್ಲುವ ಗೆಳೆಯರಿಗೆ
ಗದ್ಗದಿಸದೆ ಹರಸಿ ಆಸರೆಯಾಗಲಾರೆಯ???

Sunday, January 15, 2023

ಸಂಕ್ರಾಂತಿಯಂದರೇ...

ಸುಗ್ಗಿಯ ಸಂಭ್ರಮ
ಬೆಳೆಗಳ ಒಪ್ಪ-ಓರಣ
ಮನೆ ಮೆದೆಗಳಿಗೆ ತಳಿರು ತೋರಣ
ಮಾವು, ನೇರಳೆ, ಹಲಸು, ಅಂಕೋಲೆಯ ಅಲಂಕಾರ

ಹೊನ್ನೆ, ಉಗನಿ, ತುಂಬಿ, ಅಣ್ಣೆಹೂಗಳ ಸೇರಿಸಿ 
ಕೊಟ್ಟಿಗೆಯನಲಂಕರಿಸಿ
ರಾಸುಗಳ ಪೂಜಿಸಿ
ದುಡಿದು ದಣಿದ ದನಕರುಗಳ ಗೌರವಿಸಿ

ಕೊರಳಿಗೆ ಘಂಟೆ, ಕೊಂಬಿಗೆ ಕಳಸ
ಅಂದಚಂದದಿ ಸಿಂಗರಿಸಿ
ಕಿಚ್ಚಾರಲೊರಟ ರಾಸುಗಳೇ 
ನಮ್ಮ ಹಳ್ಳಿಗಳ್ಳಿಗೆ ಅಲಂಕಾರ 

Thursday, December 8, 2022

ಹೂವು ದುಂಬಿ ಬಂದವಿದುವೇ...

ಹೂವು ದುಂಬಿ ಬಂದವಿದುವೇ 
ಬಾಳಿಗೊಡವೆಯು
ಸ್ನೇಹಕೆಂದು ನೀವೇ ಸಿಂಧು
ಎಂದು ನಿಮ್ಮಂದ ಸಾರಿದೆ

ಬಿರಿದ ಹೂವು ಬಿಂದುವಾಗಿ ಜೇನಿನೊಡಲಲಿ
ಬಂದಿಯಾಯ್ತು ಮಧುವೆಂಬ ಮಮತೆಯಿಂದಲಿ
ದುಂಬಿ ಬಿಂದು ಬಂದಿಯಾಗಿ ಮಧುವು ಮೆರೆಯಿತು
ಮಕರಂದವಿದು ಮರೆಯಾಯ್ತು ಮಧುವಿನಂದದಿ.

Thursday, December 1, 2022

ನಾಗನ ಪೂಜೆ

ನನ್ನಾಕೆಯ ಆಸೆಗೆ ನಾವಿಕನಾಗಿ
ಸಾಗಿತು ಪಯಣ ನಾಗನ ಪೂಜೆಗೆ

ಹುತ್ತದ ಸುತ್ತಲೂ ಹಣ್ಣಿನ ರಾಶಿ
ಹಾಲು ಹರಿದಿದೆ ಝರಿಯಾಗಿ
ಹೂವಿನ ಹಂದರದೊಳದೊಳಗೇ

ಮಮ್ಮಲ ಮರುಗಿದ ಮನಸು ಕೂಗಿತು
ಪೂಜೆಯನಂತರ ಆರತಿಯೆತ್ತಿ
ಕಂದಗೂ, ಕರುವಿಗೋ ಹಾಲುತುಪ್ಪ
ಹಣ್ಣು ಹಸಿದವಗೆ  ಹಂಚಬಹುದಿತ್ತು

Saturday, November 26, 2022

ಪುರಷನೆಂಬ ಪೌರುಷದಲಿ

ಪುರಷನೆಂಬ ಪೌರುಷದಲಿ
ಪ್ರಶಾಂತತೆಯು ನಿನಗಿಲ್ಲ
ಮನೆ, ಮಡದಿ ಮಕ್ಕಳ ನೆನಪಲ್ಲಿ
ತ್ಯಾಗವೇ ನಿನದೆಲ್ಲ

ಗಂಡೆಂಬ ಗಂಡಾಂತರದಲಿ
ನಗುವಿಲ್ಲ ನಲಿವಿಲ್ಲ
ಹಗುರಾದ ಮನವಿಲ್ಲ

ದುಡಿದಣಿದು ದುತ್ತೆಂದು ಬರುವಾಗ
ದುಂಬಾಲು ಬೀಳಲಿಲ್ಲ
ಖುಷಿಯೊಂದ ನೀ ತಂದೆ
ಮನೆಮಂದಿಗೆಲ್ಲ

ತ್ಯಾಗಕ್ಕೆ ಹೆಣ್ಣೆಂದು ನೀ ಬರೆದೆಯಲ್ಲ
ನಿನ ನೋವಿಗೆ ನೀ
ಅಕ್ಷರ ರೂಪವ ಕೊಡಲೇ ಇಲ್ಲ

ಮರುಮಾತನಾಡದೆ 
ನುಂಗಿದೆ ಮನದಲ್ಲಿ ಎಲ್ಲ
ನಗುವೆಂಬ ಔಷದಿಯ ನೀ ಮರೆತು
ರೋಗರುಜಿನಗಳಿಗೆ ತುತ್ತಾದೆಯಲ್ಲ

ಮರೆಯದಿರು ಮನವ ಹಗುರಾಗಿಸಲು
ಮರೆತು ನೂರಾರು ಚಿಂತೆ
ಬಾಳು ಬೆಳಗಲಿ ಬೆಳದಿಂಗಳಂತೆ

Thursday, November 24, 2022

ಮಂದಹಾಸದ ಮುಗುಳುನಗೆ

ಇರಲಿ ಮೊಗದಲಿ
ಮಂದಹಾಸದ ಮುಗುಳುನಗೆಯೊಂದು
ಇದುವೇ ಅವಿಸ್ಮರಣೀಯ ಆಭರಣ
ಆತ್ಮವಿಶ್ವಾಸದ ಹೊಂಗಿರಣ

ಮರೆತು ಮರುಗದಿರು
ಮಗುಮೊಗದ ಮಂದಹಾಸ
ಬಾಳಿಗಿದು ಚಂದ್ರಹಾಸ
ಇದನರಿತು ಹರನಂತಿರು 

ನಗುಮೊಗದ ಮೊಗಶಾಲೆ
ಗೆಲುವಿಗಿದು ಪಾಠಶಾಲೆ
ಬಿದ್ದೆದು ಗೆದ್ದಮೇಲು ಇರಲಿ ಮೊಗದಲಿ
ಮಂದಹಾಸದ ಮುಗುಳುನಗೆಯೊಂದು

ನೀಲ ನಕ್ಷತ್ರ

ನೀಲ ನಕ್ಷತ್ರ 
ಮಿನುಗಲೇಕೆ ಮುನಿಸು
ಮಿನುಮಿನುಗಿ
ನನ್ನೆದೆಯ ದಾಹವ ತಣಿಸು 

ಒಂಟಿಯೆಂದೆಣಿಸದಿರು 
ಬಂದಿಹೆನು ಬಂದುವಾಗಿ
ಬರವಿರದೆ ಬಳಲಿರದೆ
ಬಾಳುಬೆಳಗಲಿ ನೀಲ ನಕ್ಷತ್ರದ ಬೆಳಕಳಿ

Wednesday, November 23, 2022

ಬರವಿದೆ ಪದಗಳಿಗೆ

ಬರೆಯಲೊಪ್ಪಿದೆನು
ಬರವಿದೆ ಪದಗಳಿಗೆ

ಬಣ್ಣಿಸಲೆಣಿಸಿದೆ
ಭಾಮಿನಿಯ ಬಿಸಿಯುಸಿರ

ಬಣ್ಣಿಸಲಾಗದೆ ಸೋತಿಯೆನು 
ಬಾಂಧವ್ಯದ ಬಣ್ಣನೆಯ