Monday, March 25, 2024

ಕೊಟ್ಟು, ಕನವರಿಸಲಿಲ್ಲ

ಹಿರಿಯರಿಗೆ ಈಗ 93 ಹರೆಯ, ಹುಟ್ಟಿ ಬೆಳೆದದ್ದು ಚಾಮರಾಜ ನಗರ ಜಿಲ್ಲೆಯ, ಹಳ್ಳಿಕೆರೆಹುಂಡಿಯಲ್ಲಿ, ವಿದ್ಯಾಭ್ಯಾಸ ಆಗಿದ್ದು ಟಿ ನರಸೀಪುರದ ವಿದ್ಯೋದಯ ವಿದ್ಯಾಸಂಸ್ಥೆಯಲ್ಲಿ. ವೃತ್ತಿಯಲ್ಲಿ ದೈಹಿಕ ಶಿಕ್ಷಕರು, 30ಕ್ಕೂ ಅಧಿಕ ವರ್ಷ ಸರ್ಕಾರಿ ಸೇವೆ ಸಲ್ಲಿಸಿ 1990 ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವಯೋ ನಿವೃತ್ತಿಹೊಂದಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
 
ಭಾರತೀಯ ಸೇವಾದಳದ ಸದಸ್ಯರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ತಂಡದ ಮುಖ್ಯಸ್ಥರಾಗಿ ಹಲವಾರು ವರ್ಷ ಮೈಸೂರಿನ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಇವರ ಹೆಮ್ಮೆ. 1971 ರಲ್ಲಿ ಇವರು ಭಾರತೀಯ ಸೇವಾದಳದ ಸದಸ್ಯರಾಗಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಇವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
 
ಇವರ ಹೆಸರು H B ಶಂಭಪ್ಪ, ಮಾಸ್ಟರ್ ಶಂಭಪ್ಪ ಎಂದೇ ಖ್ಯಾತನಾಮರು. ಸರ್ಕಾರಿ ಸೇವೆಯೊಂದಿಗೆ ಸಾಹಿತ್ಯ ಸೇವೆಯನ್ನು ಮಾಡಿ ಕನ್ನಡಮ್ಮನಿಗೆ ಮತ್ತು ಸಾಹಿತ್ಯ ಅಭಿಮಾನಿಗಳಿಗೆ ಉಣಬಡಿಸಿದ್ದಾರೆ. ಹಾಡುಗಳ ರಚನೆ, ಕಥೆ, ಹಾಡು ಬರೆಯುವುದು, ಹಾಡುಗಾರಿಕೆ ಇವರ ಹೆಮ್ಮೆ, ಜೊತೆಗೆ ಇವರೊಬ್ಬ ಉತ್ತಮ ವಾಗ್ಮಿಯು ಹೌದು.
 
ವೈವಾಹಿಕ ಜೀವನದೊಂದಿಗೆ ಇವರು ನೆಲೆಸಿದ್ದು ಮಳವಳ್ಳಿ ತಾಲೂಕಿನ, ಚಿಕ್ಕಬಾಗಿಲು ಗ್ರಾಮದಲ್ಲಿ, ಸಮಾಜಸೇವೆಯನ್ನು ಉಸಿರಾಗಿಸಿಕೊಂಡ ಇವರು, ನಿವೃತ್ತ ಜೀವನದಲ್ಲು ಹಳ್ಳಿಯ ವಿದ್ಯಾರ್ಥಿಗಳ ಶ್ರೇಯೋಭಿಲಾಷೆಗೆ ಶ್ರಮಿಸುತ್ತಾ, ತಮ್ಮ ಪ್ರತಿ ಹುಟ್ಟುಹಬ್ಬವನ್ನು ಚಿಕ್ಕಬಾಗಿಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ನೀಡಿ, ಊಟದ ವ್ಯವಸ್ಥೆ ಮಾಡುವುದರೊಂದಿಗೆ ಆಚರಿಸುತ್ತಾರೆ. ಅಲ್ಲದೆ SSLC ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ.
 
ವೃತ್ತಿಗಾಗಿ ಅನೇಕ ಊರು, ನಗರಗಳಲ್ಲಿ ನೆಲೆಸಬೇಕಾದ ಅವಶ್ಯಕತೆ ಉಂಟಾದರೂ ಹುಟ್ಟಿ ಬೆಳೆದ, ಬದುಕಿದ ಊರಿನ ನೆಂಟು ಬಿಡದೆ ಬದುಕಿದ್ದು ಇವರ ಹಿರಿಮೆ. ಹುಟ್ಟೂರಾದ ಹಳ್ಳಿಕೆರೆಹುಂಡಿಯಲ್ಲಿ, ಸರ್ಕಾರಿ ಶಾಲೆಯಿಲ್ಲದೇ ಅಲ್ಲಿನ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ದೂರದ ಕಾರಾಪುರ ಗೇಟ್ನಲ್ಲಿರುವ JSS ಸಂಸ್ಥೆಯ ಶಾಲೆಗೇ ಕಾಲ್ನಡಿಗೆಯಲ್ಲೇ ತೆರಳುವುದನ್ನು ಗಮನಿಸಿ, ಮಾಸ್ಟರ್ ಶಂಭಪ್ಪನವರು ತಮ್ಮ ಆಸ್ತಿಯಲ್ಲಿ, 10 ಗುಂಟೆಯನ್ನು 2016 ನೇ ಇಸವಿಯಲ್ಲಿ  ಸರ್ಕಾರಿ ಶಾಲೆತೆರೆಯಲು ದಾನವಾಗಿ ನೀಡಿದ್ದಾರೆ. ಸರ್ಕಾರ ಇಲ್ಲಿ ಶಾಲೆ ತೆರೆದು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬೇಕಿರುವುದು ಬಾಕಿ ಇದೆ.
 
ಮಾಸ್ಟರ್ ಶಂಭಪ್ಪ ತಾವು ನೀಡಿದ ಕೊಡುಗೆಯ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ, ಯಾರೊಡನೆಯೂ ಮಾಹಿತಿ ಹಂಚಿಕೊಂಡಿಲ್ಲ, ಎಡಗೈಯಲ್ಲಿ ನೀಡಿದ ದಾನ ಬಲಗೈಗೆ ತಿಳಿಯದಂತೆ ಬದುಕಿದ್ದಾರೆ, ಇದು ಅವರ ಹೆಚ್ಚುಗಾರಿಕೆ. ಶಾಲೆಗಾಗಿ ಜಮೀನು ದಾನ ಪಡೆದ ಅಧಿಕಾರಿಗಳಾಗಲಿ ಅಥವಾ ಸಂಬಂಧ ಪಟ್ಟವರಾಗಲೀ ಮಾಸ್ಟರ್ ಶಂಭಪ್ಪನವರಿಗೆ ಯಾವುದೇ ಗೌರವ ಸೂಚಿಸುವ ಗೋಚಿಗೆಹೋಗಿಲ್ಲ. (ಇದರ ಬಗ್ಗೆ ಮಾಸ್ಟರ್ ಶಂಭಪ್ಪನವರಿಗೆ ಯಾವುದೇ ಚಿಂತೆಯಿಲ್ಲ. ಇದು ನನ್ನ ಅಂಬೋಣವೇ ವರತು, ಶಂಭಪ್ಪನವರ ಅಭಿಪ್ರಾಯವಲ್ಲ, ದಯಮಾಡಿ ಇದು ಅವರ ವಯಕ್ತಿಕ ಅಭಿಪ್ರಾಯವೆಂದು ಯಾರು ಭಾವಿಸಬಾರದೆಂದು ನನ್ನ ಕೋರಿಕೆ).
 
ಸರ್ವಜ್ಞರು ನುಡಿದಂತೆ,
ಕೊಟ್ಟು ಕುದಿಯಲು ಬೇಡ |
ಕೊಟ್ಟಾಡಿ ಕೊಳಬೇಡ |
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ |
ಕಟ್ಟಿಹುದು ಬುತ್ತಿ ಸರ್ವಜ್ಞ ||
 
ಕೊಟ್ಟು ಅದರ ಬಗ್ಗೆ ಎಲ್ಲಿಯೂ ಚಕಾರವೆತ್ತದೆ, ಇದಕ್ಕೆ ಸಲ್ಲಬೇಕಾದ ಯಾವ ಗೌರವಾದರಗಳನ್ನು ಸ್ವೀಕರಿಸದೆ. ಕೊಟ್ಟು ಕನವರಿಸದೇ ಇರುವುದು ಇವರ ದೊಡ್ಡತನ.
 
ನಾನು ನನ್ನದು, ನನ್ನವರಿಗಾಗಿ ಎಂದು ಕೂಡಿಡುವ ಅದೆಷ್ಟೋ ಮಂದಿಯ ನಡುವೆ ಮಾಸ್ಟರ್ ಶಂಭಪ್ಪನವರು ವಿಭಿನ್ನವಾಗಿದ್ದಾರೆ. ಬದುಕಿನ ಇಳಿ ಸಂಜೆಯಲ್ಲೂ ಇತರರಿಗಾಗಿ ಮಿಡಿವ ಇವರ ಬದುಕು, ಆದರ್ಶ, ಬದುಕಿದ ರೀತಿ ಅನೇಕರಿಗೆ ಸ್ಪೂರ್ತಿಯಾಗಲಿ ಎನ್ನುವುದು ನನ್ನ ಅಭಿಪ್ರಾಯ. ಸರ್ಕಾರವಾಗಲಿ, ಸರ್ಕಾರೀ ಅಧಿಕಾರಿಗಳಾಗಲಿ ಮಾಸ್ಟರ್ ಶಂಭಪ್ಪನವರಿಗೆ ಧನ್ಯವಾದ ತಿಳಿಸದಿದ್ದರೇನು, ನಾವು ನೀವು ಹಿರಿಯರಿಗೆ ಗೌರವ ಪೂರ್ವಕವಾಗಿ ನಮಿಸೋಣ. ಹಿರಿಯರಿಗೆ ಧನ್ಯವಾದ ತಿಳಿಸಿ ಹಾರೈಸಬೇಕೆಂದರೆ ಕರೆ ಮಾಡಿ: 9632674052

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...