Monday, March 25, 2024

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ಮತ್ತು ನಿಂಗರಾಜಮ್ಮರವರ ಗರ್ಭಸಂಜಾತರಾದ ಶಾಂತಪ್ಪ. ಒಂದೂವರೆ ವರ್ಷದ ಮಗುವಿದ್ದಾಗ ಪೋಲಿಯೊ ಮಾರಿಗೆ ತುತ್ತಾಗಿ ಎರಡು ಕಾಲುಗಳ ಸ್ವಾದೀನ ಕಳೆದು ಕೊಂಡವರು. ಹಾಡಿ, ಕುಣಿದಾಡಿ ಬೆಳೆಯಬೇಕಿದ್ದ ಮಗು, ಪೋಲಿಯೊ ಎಂಬ ಮಹಾಮಾರಿಯ ಒಡೆತಕ್ಕೆ ಮಗ್ಗುಲಲ್ಲಿ ಮಲಗಬೇಕಾಯಿತು. ಕಾಲು ನಡೆಯಲಾಗದಿದ್ದರೇನಂತೆ, ಮಗು ಅಂದಗಾರ ಮತ್ತು ಸದಾ ಹಸನ್ಮುಖಿ. ಹುಟ್ಟಿನೊಡನೆ ಬಂದಿದ್ದ ಚಾತುರ್ಯ ಮತ್ತು ಚೆಲುವು ಶಾಂತಪ್ಪನವರನ್ನು ಎಲ್ಲರಿಗೂ ಆಕರ್ಷಿತರಾಗುವಂತೆ ಮಾಡಿತ್ತು.

 
ಬಾಲ್ಯದಲ್ಲೇ ಬಂದೊದಗಿದ್ದ ಕುಂದುಕೊರತೆಯ ಬಗ್ಗೆ ಚಿಂತಿಸದೆ ಶಾಂತಪ್ಪನವರು ವಿದ್ಯಾಭ್ಯಾಸದಲ್ಲಿ ತೊಡಗಿ, SSLC ಮುಗಿಸಿಕೊಂಡರು. ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲಾಗದೆ ಶಾಂತಪ್ಪ ಹಿಡಿದದ್ದು ಸಂಗೀತದ ದಾರಿ. ಸಂಗೀತಾಭ್ಯಾಸ ಸುರುವಿಟ್ಟ ಶಾಂತಪ್ಪನವರು ಹಾರ್ಮೋನಿಯಂ, ವಯಲಿನ್, ಕೀಬೋರ್ಡ್ ಜೊತೆಗೆ, ತಮಟೆ ಬಾರಿಸುವುದು ಮತ್ತು ಸುಶ್ರಾವ್ಯವಾಗಿ ಹಾಡುವುದನ್ನು ಕಲಿತರು. ಅವರ ನಿಷ್ಠೆಗೆ, ಶ್ರಮಕ್ಕೆ ಶಾರದೆ ಒಲಿಯದೇ ಇರಲಾಗಲಿಲ್ಲ.
 
ಬಯಸದೆ ಬಂದ ಬೇಗೆಯ ಬಗ್ಗೆ ತುಸುಹೆಚ್ಚು ಚಿಂತಿಸದೆ ಶಾಂತಪ್ಪನವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ತಮ್ಮಲ್ಲಿ ಬೆರೆತ ಸಂಗೀತವನ್ನು ಬಳಸಿಕೊಂಡರು. ಸಮಾನ ಮನಸ್ಕರನ್ನು ಒಟ್ಟುಗೂಡಿಸಿ "ವಚನ ಸಂಗಮ ಕಲಾವೃಂದ" ವೆಂಬ ತಂಡವೊಂದನ್ನು ಕಟ್ಟಿ ಅದನ್ನು ಮುನ್ನಡೆಸುತ್ತಿದ್ದಾರೆ.
 
ಥ್ರೀ ವೀಲರ್ ಸ್ಕೂಟರ್ ಹತ್ತಿ ಸುತ್ತಾಡುವ ಶಾಂತಪ್ಪನವರು, ತಮ್ಮ ಕೊರತೆಯ ಬಗ್ಗೆ ಕೊರಗಲಿಲ್ಲ. ಒಲಿದ ಸಂಗೀತ ದೇವಿಯನ್ನು ಆರಾಧಿಸುತ್ತ, ಸ್ವತಂತ್ರ ಬದುಕೊಂದನ್ನ ಕಟ್ಟಿಕೊಂಡಿದ್ದಾರೆ. ಇಂದು ಇವರು ಹಾಡಲು ಕೂತರೆ ತಲೆಬಾಗದ ಸಂಗೀತ ಪ್ರೇಮಿಗಳಿಲ್ಲ, ಹಾರ್ಮೋನಿಯಂ ಅಥವಾ ವಯಲಿನ್ ಹಿಡಿದರೆ ಈ ಸುಂದರನಿಗೆ ಸುಸ್ತಾಗುವುದೇ ಇಲ್ಲ, ಇವರ ಕೈ ಕೆಳಗಿಳಿಸೆಂದು ಕೇಳುವುದಿಲ್ಲ. ಚಾಮರಾಜನಗರ, ಟಿ ನರಸೀಪುರ, ಕೊಳ್ಳೇಗಾಲ, ಮಳವಳ್ಳಿ, ತಲಕಾಡು ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಶಾಂತಪ್ಪನವರ ಸಂಗೀತ ಸೇವೆ ಸದಾ ಹಸಿರು. ಇವರು ನಡೆಸಿಕೊಡುವ ಭಜನೆಗೆ ಆಶೀರ್ವದಿಸಿದ ಗುರುವರ್ಯರು ಹಲವರು.
 
ಶ್ರೀಮಠಗಳ ಹಾಗು ಸಾಮಾನ್ಯರ ಮನೆಗಳಲ್ಲಿ ನಡೆಯುವ ಅದೆಷ್ಟೋ ಸತ್ಕಾರ್ಯಗಳಲ್ಲಿ ಶಾಂತಪ್ಪನವರ ಹಾರ್ಮೋನಿಯಂ, ವಯಲಿನ್ ಗಂಟೆಗಟ್ಟಲೆ ನುಡಿಯುತ್ತದೆ, ಇವರ ಸಂಗೀತ ಸುಧೆ ಸಾಗರೋಪಾದಿಯಲ್ಲಿ ಸಾಗಿ ಎಲ್ಲರನ್ನು ರಂಜಿಸುತ್ತಿದೆ. ಹಾರ್ಮೋನಿಯಂ ಮುಂದೆ ಕುಳಿತ ಶಾಂತಪ್ಪನವರನ್ನು ವಿಷೇಶ ಸಮರ್ಥರು ಎಂದು ಎಣಿಸಲು ಅಸಾಧ್ಯ, ಇವರ ಅಂದ ಎದುರಿಗಿದ್ದವರನ್ನು ಹುಬ್ಬೇರಿಸದೆ ಇರಲಾರದು.
 
ಬಾಲ್ಯದಲ್ಲೇ ನೊಂದ ಇವರು ತಮ್ಮ ಕೊರತೆಯ ಬಗ್ಗೆ ಕೊರಗದೆ, ಗೆದ್ದು ತಮ್ಮ ಬದುಕನ್ನು ಸುಂದರವಾಗಿಸಿಕೊಂಡ ಸುಂದರ. ಸಮಾಜ ಅದೆಷ್ಟೋ ವಿಷೇಶ ಚೇತನರನ್ನು ಗಮನಿಸಿ ಉದ್ಧರಿಸದೆ, ದೇವರು-ದಿಂಡರನ್ನು ಬಯ್ಯುತ್ತ, ಹಣೆಬರಹವೇ ಇಷ್ಟೇಂದು ದೋಷಿಸಿ ದೋಷಿಗಳನ್ನಾಗಿಸುತ್ತದೆ. ಅಂತಹ ಎಷ್ಟೋ ಉದಾಹರಣೆಗಳ ನಡುವೆ ಶಾಂತಪ್ಪ ಶೈನಿಂಗ್ ಸ್ಟಾರ್, ಅವರ ನಗುಮೊಗ, ಸಾಧನೆ ಉಳಿದವರನ್ನು ಉದ್ಧರಿಸದೆ ಇರಲಾರದು. ದೈವವನ್ನು ದೊಷಿಸುತ್ತ ದುಃಖಿತರಾಗದೆ ದುಡಿದು, ಬೆಳೆದು ಹಲವರಿಗೆ ಅವಕಾಶವಿತ್ತು ಸ್ಪೂರ್ತಿಯ ಚಿಲುಮೆಯಾದ ಇವರು ನನಗಂತೂ ದೇವರಾಗೇ ಕಂಡರೂ.
 
ಶಾಂತಪ್ಪನವರ ಬದುಕು ನಾನು ಬರೆದಷ್ಟು ಸುಲಭವಲ್ಲ, ಪ್ರತಿ ಗೆಲುವಿಗೂ ಅವರು ಸಾಕಷ್ಟು ಶ್ರಮಿಸಿದ್ದಾರೆ, ನಮಗೂ-ನಿಮಗೂ ಕಡಿಮೆ ಸಮಯ ಬೇಡುವ ಬದುಕಿನ ಪ್ರತಿಮೆಟ್ಟಿಲು ಶಾಂತಪ್ಪರವರಿಂದ ಅಧಿಕವಾಗೇ ದುಡಿಸಿದೆ, ಆದರೆ ಅವರ ಸಾಧನೆ ಹಲವರ ಬಾಳಲ್ಲಿ ಬೆಳಕು ತರುವುದಂತೂ ಸತ್ಯ. ಆದ ತೊಂದರೆ, ಅನಾನುಕೂಲಗಳ ಬಗ್ಗೆ ಚಿಂತಿಸದೆ ಸಿಕ್ಕ ಅವಕಾಶಗಳನ್ನೂ ಬಳಸಿಕೊಂಡರೆ ಬಾಳು ಬೇಕಾಗುವುದು ಸತ್ಯವೆನ್ನುವುದಕ್ಕೆ ಶಾಂತಪ್ಪನವರು ನೈಜ ಉದಾಹರಣೆ. ಬನ್ನಿ ಶಾಂತಪ್ಪನವರ ಜೀವೋನೋತ್ಸಹಕ್ಕೆ, ಸಾಧನೆಗೆ ನಮ್ಮದೊಂದು ಸಲಾಮು ತಿಳಿಸೋಣ.

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...