Friday, March 22, 2024

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ. ಇರಲಿ ಅದಕ್ಕೊಂದು ನೀತಿ. ಭಾಗ - 2

ಆಕೆಯ ನಿರಾಕರಣೆಯೇನೋ ದ್ವೇಷ ಹುಟ್ಟಿಸುವ ಬದಲು, ಆತ ಬದುಕ ನೋಡುವ ದೃಷ್ಟಿಯನ್ನು ಬದಲಿಸಿತು ಆದರೆ ಪ್ರೀತಿಯ ತಿರಸ್ಕಾರದ ನೋವು ನರಳಿಸದೇ ಬಿಟ್ಟಿತೇ? ಅದರಲ್ಲೂ ಆತನದು ನಿಸ್ಕಲ್ಮಶ ಚೊಚ್ಚಲ ಪ್ರೀತಿ!
 
ಇತಿಹಾಸದುದ್ದಕ್ಕೂ ಬೇರಾವ ನಿರಾಕರಣೆ, ಸೋಲು ನೀಡದ ನೋವು, ಸಂಕಟ ನೀಡಿ ಗೆದ್ದಿರುವುದು ಪ್ರೀತಿಯೊಂದೇ ಎನ್ನಬಹುದೇನೋ, ಕಳೆದು ಕೊಂಡವನ ಕೊರಗು ಕೊನೆಮೊದಲಿಲ್ಲದ್ದು. ಅದರಲ್ಲೂ ಹದಿಹರೆಯದ ಎದೆಅಂಗಳದಲ್ಲಿ ಕನಸುಗಳಿಂದಲೇ ಕಟ್ಟಿದ ಪ್ರೀತಿಯ ಕೋಟೆ ಅದು, ಹಾಗು ತಿರಸ್ಕಾರವಾದ ಬಗೆಯಂತೂ ಆತನ ಎದೆಯನ್ನ ಬಗೆಬಗೆದು ಕೊಲ್ಲುತಿತ್ತು. ಅದೆಷ್ಟೋ ಉದಾಹರಣೆಗಳಲ್ಲಿ, ಪ್ರೀತಿಯ ಸೋಲು ಎಷ್ಟೋ ಯುವಕರಿಗೆ ಮದ್ಯದ ಮದಕ್ಕೂ ಸಿಗರೇಟಿನ ಸಂಗಡಕ್ಕೂ, ಜೀವನದ ನಿರ್ಲಕ್ಷ್ಯಕ್ಕೂ ಆಹ್ವಾನವಿತ್ತರೆ, ಈತನ ದಾರಿಯೇ ಬೇರೆ. ಪ್ರೀತಿಎಂಬ ಪಕ್ಷದಿಂದ ಉಚ್ಚಾಟಿತನಾದ ಮೇಲೆ, ಆತನ ಕೈಹಿಡಿದದ್ದು ಪುಸ್ತಕ, ಪೆನ್ನು ಹಾಗು ಕಂಪ್ಯೂಟರ್! ಓದು ಅರಿವುಮೂಡಿಸಿದರೆ, ಪೆನ್ನು ಅನುಭವಕ್ಕೆ ಅಕ್ಷರನೀಡಿತು.
 
"ನನ್ನ ಪ್ರೀತಿಸಲು ನಿನಗೇನು ಯೋಗ್ಯತೆಯಿದೆ" ಎಂದು ಆಕೆ ಇತ್ತಿದ್ದ ಶಾಪದಿಂದ ಕುಗ್ಗಿದೆದೆ ಕಣ್ಣಾವೆಗಳಲ್ಲಿ ಹರಿಸಿದ ನೀರು, ಅದೆಷ್ಟೋ ಪುಸ್ತಕಗಳ ಹಾಳೆಗಳಲ್ಲಿ ಕರಗಿಹೋಗಿತ್ತು, ಮನದ ಬೇಗೇ ಪೆನ್ನಿನ ತುದಿಯಂಚಲ್ಲಿ ತುಳಿದು ತಣ್ಣಗಾಗಿತ್ತು. ಪ್ರೀತಿಯಲಿ ಸೋತ ಸಾಲಗಾರ ನಾನೆಂದು ಬರೆದು ಕೊಂಡಿದ್ದ...
 
ನಾನ೦ದುಕೊಂಡಿರಲಿಲ್ಲ ಗೆಳತಿ
ಕೊಡಬೇಕಾಗಿದೆ ಇಷ್ಟೊ೦ದು ಕಪ್ಪ, ಕಾಣಿಕೆ!
ನಿನ್ನ ಗೆಲುವಿಗೆ!!! ಪ್ರೀತಿಯ ಸೋಲಿಗೆ
ಎಸ್ಟೊಂದು ಪಡೆದೊಯ್ಯಿದೆ?
ಬಂದು, ಬಳಗ, ಬಾ೦ದವ್ಯ...
ಸೋತರಿಸ್ಟು... ಗೆದ್ದರಿನ್ನೇಸ್ಟೆತ್ತೊ ಉಡುಗೊರೆಯಾಗಿ?
 
ಕಂಪ್ಯೂಟರ್ ಮುಂದೆ ಕುಂತವ, ಅಗಲಿರುಳೆನ್ನದೆ ದುಡಿದ. ಹೊಸದಿದ್ದ IT ಯುಗಕ್ಕೆ ತನ್ನಲಿರ ಬೇಕಾದ ಕೌಶಲ್ಯಗಳ ಕಸರತ್ತು ನಡೆಸುತ್ತ ಕಳೆದು ಹೋದ. ಕಾಲನ ಕೃಪೆಯೇ ಹಾಗೆ, ಎಲ್ಲವನೂ ಗುಡಿಸಿ ತೊಳೆದು ಮರೆಸಿಬಿಡುವ ಮೆಜಿಷಿಯನ್ ಅಂದ್ರೆ ಟೈಮ್! ಅದಕೊಂದಿಷ್ಟು ಅವಕಾಶವಿತ್ತರೆ ಸಾಕು, ಹಗುರಾಗಿಸುತ್ತದೆ. ಮಾಸಗಳು ಕಳೆದಂತೆ ಮಾಸಿತು ಅವಳಿತ್ತ ಶಾಪ, ಮರೆವಿನ ಮುಖವಾಡತೊಟ್ಟು ಮುನ್ನಡೆದ ಆತ ಮನದಲ್ಲಿ ಗುನುಗಿದ...
 
ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ.
 
ಮಾಸ್ಟರ್ ಡಿಗ್ರಿ, ಜೊತೆಗೆ ಕೈಸೇರಿದ ವೃತ್ತಿಪರ ಕೋರ್ಸ್ ದಣಿವರಿಯದೆ ದುಡಿದ ಶ್ರಮ ಆತನನ್ನು ಒಂದೊಂದೇ ಮೆಟ್ಟಿಲು ಏರಿಸುತ್ತಾ IT ಯುಗದಲ್ಲಿ, ನೆಲೆಯೂರಿಸಿತು. ಸಂಬಳ ಬಡತನ ನಿವಾರಿಸಿದರೆ, ಹಿಂದಿನ ಸೋಲು ಸ್ಪೂರ್ತಿಯಾಗಿತ್ತು! ಸ್ಪೂರ್ತಿಯ ಸೆಲೆಯಾದ ಆಕೆಗೆ ಆತ ನೀಡಿದ ಗೌರವ!
 
ಅರಿಯದಾಗಿದೆ ಎಲೆ ಹುಡುಗಿ
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
 
ಆತನಿಗೆ ಸುಮಾರು 25 ರ ಹರೆಯ, ನೊಂದ ಮನಸು ನೋವೆಲ್ಲಾ ಕೆದಕಿ ಆಗೊಮ್ಮೆ ಈಗೊಮ್ಮೆ ಕಾಡುತ್ತಲೇ ಇತ್ತು. ಪ್ರೀತಿಯ ಪಚೀತಿ ಬೇಡವೆಂದು ನಿರ್ಧರಿಸಿ ಆತ ಆಯ್ಕೆ ಮಾಡಿದ್ದೂ ಮದುವೆ! ಹಿರಿಯರೊಪ್ಪಿದ ಕನ್ಯೆನೋಡಲು ಹೊರಟವನು ಕಂಡ ಕನ್ಯೆಯೊಡನೆ, ತಾ ಕಟ್ಟಿದ್ದ ಪ್ರೀತಿಯ ಕನಸಿನ ಮಹಲು, ಅದು ನೆಲಕಚ್ಚಿ ನೆಮ್ಮದಿಯನ್ನು ಕಸಿದುಕೊಂಡಿದ್ದ ಕಹಿನೆನಪು ಎಲ್ಲ ತಿಳಿಸಿ, ಒಪ್ಪಿದರೆ ಕಣ್ಣಕಾಯುವ ರೆಪ್ಪೆಯಹಾಗಿ ಬದುಕುವುದಾಗಿ ಬರವಸೆಯಿತ್ತ. ಕನ್ಯೆ, ಸುಂದರ ಸ್ಪೂರ್ತಿಯ ಸೆಲೆ! ಕುಂದಿದ್ದ ಕನಸ ನೀರೆರೆದು ಬೆಳೆಸಿ, ಆತನ ಅರ್ಥ ಮಾಡಿಕೊಂಡಳು, ಅರ್ಧಾಂಗಿಯಾದಳು. ಈತನೋ ಬೆಂದಿದ್ದ ಭಾವಜೀವಿ, ಆಕೆಯ ಕೈಹಿಡಿದು ಎಲ್ಲ ಬೆರಗಾಗುವಂತೆ ಬಾಳಿದ. ಬಾಳ ಗೆಳತಿಯ ಬಾಂಧವ್ಯದ ಬಣ್ಣನೆ ಆತನಿಗೋ ಬಣ್ಣಿಸಲಾಗದ್ದು, ಆದರೂ ಅದಕ್ಕೂ ಅಷ್ಟಿಷ್ಟು ಅಕ್ಷರ ರೂಪ.
 
ಗೆಳತಿ!!!
ಅದಾವ ಕ್ಷಣದಲಿ ನೀ ಸೃಷ್ಟಿಕರ್ತೆಯಾದೆ?
ಅದಾವ ಕ್ಷಣದಲಿ ನನ ಮನಸಿಗೆರಡು ರೆಕ್ಕೆ ಕೊಟ್ಟೆ?
ಹಾರುತ್ತಿದೆ ಮನಸಿಂದು ಸ್ವಚ್ಚಂದವಾಗಿ...
ನಿನ್ನಿಂದಲೇ...
 
ನಿಂತನೀರಾಗಿ ಕೊಳೆತು ನಾರುವ ಬದಲು, ಹರಿದು ಹಗುರಾಗುವುದು ಒಳಿತು. ಬದುಕಿನ ಅದೆಷ್ಟೋ ತಿರುವುಗಳು ನಮ್ಮನ್ನು ಕನ್ಫ್ಯೂಸ್ ಮಾಡುತ್ತವೆ, ಕಣ್ಣೀರು ತರಿಸುತ್ತವೆ. ಆ ತಿರುವಿನಲ್ಲಿ ಕಣ್ಣೀರುತುಂಬಿ ಮೊಬ್ಬಾದ ದೃಷ್ಟಿಯಲ್ಲಿ ಎತ್ತಲೋ ಸಾಗುವ ಬದಲು. ಕೊಂಚ ಸಮಯವಿತ್ತು. ಕಣ್ಣೀರು ಕರಗಿ, ದೃಷ್ಟಿ ತಿಳಿಯಾದಮೇಲೆ ದೃಢನಿರ್ಧಾರವೊಂದ ತಗೆದುಕೊಂಡು ಬದುಕು ಕಟ್ಟಿಕೊಳ್ಳುವುದು ಜಾಣ್ಮೆ. ಕವಿದ ಕತ್ತಲಾಚೆ ಬೆಳಕೊಂದು ಕಾದಿರುತ್ತದೆ, ಸ್ವಲ್ಪ ಕಾಯಿರಿ, ಗೆಲುವು ನಿಮ್ಮದೇ...
 
(ಕೊನೆಯದಾಗಿ ಓದುಗಮನಸಿಗೆ, ಇದು ಕಟ್ಟಿದ ಕಥೆಯಲ್ಲ ಹಾಗಾಗಿ ಎಲ್ಲೂ ನಿಮ್ಮ ಕಲ್ಪನೆಗೆ ಅವಕಾಶವಿಡದೆ, ಕಂಡದೆಲ್ಲ ಕೊರೆಯದೆ ಕೊಂಚವೇ ಹೇಳಿ ಮುಗಿಸಿದ್ದೇನೆ. ಮನ್ನಿಸಿ.)

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...