Friday, March 22, 2024

ಬದುಕಿಸಿತ್ತಾ ಬನ್ನೂರ ಬ್ರಿಡ್ಜ್

ಪರಮ್ ಕಷ್ಟಗಳೊಂದಿಗೆ ಬೆಳೆದ ಹುಡುಗ. ಹಳ್ಳಿಯ ಬದುಕು, ಮನೆಯ ಪರಿಸ್ಥಿತಿ ಕೃಷಿಯೊಂದಿಗಿನ ಒಡನಾಟ ಅವನನ್ನು ಶ್ರಮಜೀವಿಯನ್ನಾಗಿಸಿತ್ತು. ಪದವಿಮುಗಿಸಿ ಬೆಂಗಳೂರಿನಲ್ಲಿ ಕೆಲಸಗಿಟ್ಟಿಸಿಕೊಂಡಾತ ಹಗಲಿರುಳೆನ್ನದೆ ದುಡಿಯತೊಡಗಿದ, ಬೆಂಗಳೂರಿಗೆ ಬರುವ ಮೊದಲು ಮಳೆ-ಚಳಿ, ಬಿಸಿಲು ಬೆಂಕಿಯನ್ನದೆ ದುಡಿದಿದ್ದ ದೇಹವದು AC ರೂಮಿನ ಅಧಿಕ ಘಂಟೆಗಳ ಕೆಲಸ ಅವನಿಗೇನು ಹೊರೆಯೆನಿಸಲಿಲ್ಲ. ಕೆಲಸದ ಮೇಲಿದ್ದ ನಿಷ್ಠೆ, ಅವನ ಶ್ರಮ ಪರಮ್ ನನ್ನು ಬೆಳಿಸಲು ಹಿಂಜರಿಯಲಿಲ್ಲ. ಶ್ರಮ ಸಕ್ಸಸ್ ಎಡೆಗೆ ಹೆಜ್ಜೆ ಹಿಡಿಸಿತ್ತು.
 
ಬೆಂಗಳೂರೇ ಹಾಗೆ ಬಂದವರನ್ನೆಲ್ಲ ಬಂಧುವಾಗಿಸಿಕೊಳ್ಳುತ್ತದೆ. ಅದು ಅವಕಾಶಗಳ ಆಗರ, ದುಡಿಮೆಯನ್ನು ನಂಬಿದವರನ್ನೆಲ್ಲ ದುಡಿಸಿ ಬೆಳೆಸಿಕೊಳ್ಳುವುದು ಮಣ್ಣಿನ ಮಮತೆ.  ಅಂತೆಯೇ ಪರಮ್ ನನ್ನು ಬೆಂಗಳೂರು ಪ್ರೀತಿಯಿಂದ ಕೈಹಿಡಿದು ಬೆಳೆಸಿತ್ತು. ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡ ಪರಮ್, ತನ್ನೂರಲ್ಲಿ ತಂದೆ-ತಾಯಿಗೆ ಆಸರೆಯಾಗಿ ಅವರು ತಡವರಿಸದಂತೆ ಬದುಕುಸಾಗಿಸಲು ಸಹಕರಿಸುತ್ತಿದ್ದ. ಕಾಲ ಕಾಲಕ್ಕೆ ಏನೇನೋ ನಡೆಯಬೇಕೋ ಹಾಗೆ ಪರಮ್ ವಿವಾಹಿತನಾದ, ನವ ಜೋಡಿಗಳ ಮಡಿಲಲ್ಲಿ ಮಗುವೊಂದು ನಕ್ಕು ಪರಮ್ ನ ಸಂಸಾರವನ್ನು ಇನ್ನಷ್ಟು ಸುಖಿಯಾಗಿಸಿತ್ತು. ನನಗೆ ನೀನು-ನಿನಗೆ ನಾನು ಎಂದು ಕಷ್ಟ-ಸುಖಗಳಲ್ಲಿ ಹೆಗಲುಕೊಟ್ಟು ನಡೆಯುತ್ತಿದ್ದ ಕುಟುಂಬವದು.
 
ಕೆಲಸದ ನಿಮಿತ್ತ ಪರಮ್ ಬೆಂಗಳೂರಿನಿಂದ ಮೈಸೂರಿಗೆ ವರ್ಗಾಯಿತನಾದ. ಪರಮ್ ನ ಕಷ್ಟಕ್ಕೆ ಕರುಣೆ ಇಟ್ಟು ಬೆಳಿಸಿದ್ದ ಬೆಂಗಳೂರಿನ ಕಂಪನಿ ಬೀಳ್ಕೊಡುಗೆಯೊಂದಿಗೆ ಬಿಟ್ಟುಕೊಟ್ಟಿತ್ತು, ಮೈಸೂರಿನ ಹೊಸ ಆಫೀಸಿಗೆ ಬಂದಿಳಿದ ಪರಮ್ ತನ್ನ ಶ್ರಮ, ನಿಷ್ಠೆ ಮತ್ತು ಅಚ್ಚುಕಟ್ಟು ತನದೊಂದಿಗೆ ಕೆಲಸ ಸುರುವಿಟ್ಟ. ಹೊಸ ಜಾಗದಲ್ಲಿ ದಿನಗಳುರುಳಿ, ತಿಂಗಳಾಗಿ, ವರ್ಷಗಳಾದವು. ನುರಿತ ಅನುಭವದೊಂದಿಗೆ ಪ್ರೊಮೋಶನ್ಗಳು ಪರಮ್ ನ ಕೈಹಿಡಿದ್ದವು. ಆದರೂ ಪರಮ್ ಹೊಸ ಆಫೀಸಿಗೆ ಹೊರಗಿನವನಾಗೆ ಉಳಿದುಹೋಗಿದ್ದ. ಬೆಂಗಳೂರಿಂದ ಬಂದ ಬದಲಾವಣೆಯನ್ನು ಹೊಸ ಆಫೀಸು ಬರಮಾಡಿಕೊಂಡಿರಲಿಲ್ಲ, ಕಾರ್ಪೊರೇಟ್ ಪಾಲಿಟಿಕ್ಸ್ ಅನ್ನೋ ಭೂತ ಅವನನ್ನು ಬೆಂಬಿಡದೆ ಕಾಡುತಿತ್ತು.
 
ಕಾರ್ಪೊರೇಟ್ ಪಾಲಿಟಿಕ್ಸ್ ಅನ್ನೋ ಭೂತವೇ ಹಾಗೆ, ಅದಾವ ಕಾರಣಕ್ಕೆ ಹುಟ್ಟಿಕೊಳ್ಳುತ್ತದೆ ಎಂದೇಳಲು ಸಾಧ್ಯವಿಲ್ಲ! ಅದು ಬಾಷೆ, ಬಕೆಟ್ ಹಿಡಿವವರ ಹಿಂಡು, ಸೋಮಾರಿಗಳಿಡುವ ಸವಾಲು, ದೊಡ್ಡವರ ಸಣ್ಣತನ, ಮೈಕ್ರೋಮ್ಯಾನೇಜುಮೆಂಟ್, ಗುಂಡಿನ ಗ್ಯಾಂಗ್, ಡಿಮ್ಯಾಂಡಿಂಗ್ ಕ್ಲೈಂಟ್, ಕೆಲಸದ ಒತ್ತಡ ಹೀಗೆ ಅದಕ್ಕೆ ವಲ್ಲದ ಕಾರಣಗಳಿರಬಹುದು. ಕಾರ್ಪೊರೇಟ್ ಪಾಲಿಟಿಕ್ಸ್ ಕೊಲ್ಲದೆ ಕಾಡುವ ಭೂತ! ಇದು ಕೊಟ್ಟಷ್ಟು ಕಾಟ, ಹಿಂಡಿದಸ್ಟು ಜೀವ, ಬೇರಾವ ಜೀವಿಯು ಕೊಟ್ಟಿರಲಾರದು. ಇದರ ತೆಕ್ಕೆಗೆ ಬೀಳದೆ, ನೋಯದೆ ಗೆದ್ದಂತಹ ಕಾರ್ಪೊರೇಟ್ ಎಂಪ್ಲಾಯೀಸ್ ಸಿಗುವದೇ ಕಷ್ಟ. ಹೀಗೆ ಕಾರ್ಪೊರೇಟ್ ಪಾಲಿಟಿಕ್ಸ್ ವ್ಯೋಹಕ್ಕೆ ಸಿಕ್ಕ ಪರಮ್ ಪಡಬಾರದ ಕಷ್ಟ ಪಟ್ಟ. ಆದರೂ ಶ್ರಮ ಅವನ ಕೈಬಿಟ್ಟಿರಲಿಲ್ಲ. ಕಾಯಕವೇ ಕೈಲಾಸವೆಂದು ನಂಬಿದ್ದ ಪರಮ್, ಪರರ ಅಪವಾದಕ್ಕೆ, ದೊಡ್ಡವರ ಸಣ್ಣತನಕ್ಕೆ ತಲೆ ಕೆಡಿಸಿಕೊಳ್ಳದೆ, ತಾನಾಯಿತು ತನ್ನ ಕೆಲಸವಾಯಿತೆಂದು ಮುನ್ನಡೆದಿದ್ದ.
 
ಕೈಸೇರಿದ ಸ್ವಲ್ಪ ಹಣ ಮತ್ತು ಆದಾಯ ತೆರಿಗೆ ಉಳಿಸುವ ನೆಪದೊಂಗಿದೆ. ಪರಮ್ ತನ್ನ ಬದುಕಿನ ಮೈಲುಗಲ್ಲೊಂದ ಮುಟ್ಟಲು ಮನಸು ಮಾಡಿದ್ದ. ಮಿಸ್ಸೆಸ್ ಪರಮ್ ಮಡಿಲಲ್ಲಿ ಹೆಣ್ಣುಮಗುವಿನ ಆಗಮನ, ಅದರ ಅದೃಷ್ಟದೊಂದಿಗೆ ಪರಮ್ ಅರಮನೆ ನಗರಿಯಲ್ಲಿ ಮನೆಯೊಂದ ಖರೀದಿಸಿದ. ಅದು ಚೊಚ್ಚಲ ಕನಸು ಕೈಸೇರಿದ್ದ ಕಾಲ. ಮಿಸ್ಸೆಸ್ ಅಂಡ್ ಮಿಸ್ಟರ್ ಪರಮ್ ಹೊಸಮನೆಯ ಗೃಹಪ್ರವೇಶಕ್ಕೆ ಅಣಿಯಾಗುತ್ತಿದ್ದರು. ಅದು ವಾರಾಂತ್ಯ, ಪರಮ್ ಗೃಹ ಪ್ರವೇಶದ ಪತ್ರಿಕೆಯೊಂದಿಗೆ ಸ್ನೇಹಿತರು, ನೆಂಟರುಗಳನ್ನು ಆಮಂತ್ರಿಸಲು ಓಡಾಡುತ್ತಿದ್ದ, ಶುಭಕಾರ್ಯ ಇನ್ನೊಂದುವಾರವಷ್ಟೇ ಬಾಕಿಯಿತ್ತು. ಇನ್ವಿಟೇಷನ್ಸ್ ಕಾರ್ಡ್ಗಳೊಂದಿಗೆ ಓಡಾಡುತ್ತಿದ್ದ ಪರಮ್ ಗೆ ಆಫೀಸ್ ಇಂದ ಬಂದ ಕಾಲ್ ಆಘಾತ ತಂದಿತ್ತು.
 
ಕೇಕೆಹಾಕಿ ಕಾದಿದ್ದ ಕಾರ್ಪೊರೇಟ್ ಪಾಲಿಟಿಕ್ಸ್, ಪರಮ್ ನನ್ನು ಖೆಡ್ಡಕ್ಕೆ ಬೀಳಿಸಲು ಯಶಸ್ವಿಯಾಗಿತ್ತು. ಕಂಪನಿ ಹಿಂದೆಮುಂದೆ ಯೋಚಿಸದೆ ಪರಮ್ ನನ್ನು ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರ ಮಾಡಿಯಾಗಿತ್ತು. ಆಫೀಸ್ಇಂದ ಕರೆ, ಸೋಮುವಾರವೇ ಕಡೇ ದಿನ ಬಂದು ID ಕಾರ್ಡ್ ಲ್ಯಾಪ್ಟಾಪ್ ಸಬ್ಮಿಟ್ ಮಾಡಿ ಹೊರಡಬಹುದೆಂದು ಹೇಳಿ ಕರೆ ಕಟ್ಟಾಗಿತ್ತು. ವಿಷಯತಿಳಿದು ಮೈಸೂರಿನೆಡೆಗೆ ಹೊರಟ ಪರಮ್ ಬಂದು ನಿಂತದ್ದು ಬನ್ನೂರಿನ ಬ್ರಿಡ್ಜ್ ಮೇಲೆ. ಕಣ್ಣೆದುರಿಗೆ ಆಗಷ್ಟೇ ಮಾಡಿದ್ದ ಮನೆ ಸಾಲ, ಇನ್ನೊಂದುವಾರದಲ್ಲಿದ್ದ ಹೊಸ ಮನೆ ಗೃಹಪ್ರವೇಶ. ಕೈಜಾರಿದ್ದ ಕೆಲಸ, ಕಟ್ಟಬೇಕಿದ್ದ ಬ್ಯಾಂಕ್ EMI, ಸಾಲದ ಹೊರೆ, ತನ್ನದಲ್ಲದ ತಪ್ಪಿಗೆ ಕೈಜಾರಿ ಹೋಗಿದ್ದ ಕೆಲಸ, ಪರಮ್ ನ ಮುಂದಿನ ದಾರಿಯನ್ನು ಮಬ್ಬಾಗಿಸಿದ್ದವು. ಪರಿಸ್ಥಿತಿ ಕೈಮೀರಿದೆ ಮಾಡಿದ ಸಾಲಕ್ಕೆ ಮುಖ ಮಾಡಿನಿಲ್ಲುವುದೆಂತು, ಮನೆಯ ಗೃಹಪ್ರವೇಶಕ್ಕೆ ಬರುವ ನೆಂಟರಿಷ್ಟರ ಮಾತನಾಡಿಸುವುದೆಂತು ಎಂದು ಯೋಚಿಸಿ, ಆತ್ಮ ಹತ್ಯೆಯ ನಿರ್ಧಾರ ಮಾಡಿ ನಿಂತಿದ್ದು ಬನ್ನೂರಿನ ಬ್ರಿಡ್ಜ್ ಮೇಲೆ, ನೆಗೆಯುವುದಷ್ಟೇ ಬಾಕಿ. ಬಾರವಾದ ಹೃದಯ, ನೊಂದ ಮನಸು ಆತ್ಮ ಹತ್ಯೆಯನ್ನೇ ಬೆಂಬಲಿಸಿದ್ದವು. ಹರಿಯುತ್ತಿದ್ದ ಕಾವೇರಿ ನೋಡುತ್ತಾ ನಿಂತ ಪರಮ್ ನನ್ನು ಮನೆಯಲ್ಲಿದ್ದ ಹಸುಗೂಸು ಕೈಹಿಡಿದು ಜಗ್ಗಿದಂತಾಹಿತು. ಪರಮ್ ನ ಕಣ್ಣೀರಕೋಡಿ ನದಿತಟತಲುಪಿದ್ದವು. ಹಸುಗೂಸು ಪಿಸುಧ್ವನಿಯಲ್ಲಿ ಅಪ್ಪ ಎಂದಿತ್ತು.
 
 
ಕೆಲಸ ಹೋದರೇನಂತೆ, ಕೂಲಿ ಮಾಡಿದರಾಯಿತು, ಇಂದಲ್ಲ ನಾಳೆ ಇನ್ನೊಂದು ಕೆಲಸ ಸಿಕ್ಕಿತು, EMI ಕಟ್ಟಲು ಸಾಧ್ಯವಿಲ್ಲದಿದ್ದರೆ ಮನೆ ಮಾರಿದರಾಯಿತು ಎಂದು, ಬ್ರಿಡ್ಜ್ ನಿಂದ ಹಿಂದಡಿ ಇಟ್ಟ. ಕಣ್ಣೀರ ಒರೆಸಿ, ಮಡದಿ ಮಕ್ಕಳ ನೋಡಲು ಓಡೋಡಿ ಬಂದ, ಮನೆಗೆ ಮರಳಿ ಆಫೀಸ್ನ ಕಾಲ್, ಅದು ತಿಳಿಸಿದ್ದ ಸುದ್ದಿ ಮಡದಿಗೆ ಮುಟ್ಟಿಸಿದ. ಆಕೆ ಗಟ್ಟಿತಿತ್ತಿ ಆದದ್ದಾಗಲಿ ನೀವು ತಾಳ್ಮೆವಹಿಸಿ, ನಾಳೆ ಆಫೀಸಿಗೆ ಹೋಗಿ ಲ್ಯಾಪ್ಟಾಪ್ ಕೊಟ್ಟು ಬನ್ನಿ ಮುಂದೆ ನೋಡೋಣವೆಂದು ಸಮಾಧಾನಿಸಿ ಪರಮ್ ನ ಕೈಯಲ್ಲಿ ಕೂಸಿಟ್ಟಳು.
 
ಪರಮ್ layoff  ಸುದ್ದಿ ಅವನ ಜಾಗಕ್ಕೆ ಬೇರೊಬ್ಬನನ್ನು ನಿಯೋಜಿಸಿ, ಪರಮ್ ಮ್ಯಾನೇಜ್ ಮಾಡುತಿದ್ದ Client ಗಳಿಗೆ ಸುದ್ದಿ ಮುಟ್ಟಿಸಿದ್ದ ಇಮೇಲ್ ನೋಡಿದ ಕೂಡಲೇ, ಪರಮ್ ಕೆಲಸದ ಅರಿವಿದ್ದ Clients ತಮಗೆ ಪರಮ್ ಬೇಕೇ ಬೇಕೆಂದು ದುಂಬಾಲು ಬಿದ್ದಿದ್ದರು. ID ಕಾರ್ಡ್, ಲ್ಯಾಪ್ಟಾಪ್ ಕೊಟ್ಟು ಹೋಗಲು ಬಂದ ಪರಮ್ ನನ್ನು ಕಂಪನಿ ಆಗಿದ್ದ ಅತಾಚುರ್ಯಕ್ಕೆ ಕ್ಷಮೆಯಾಚಿಸಿ ಒಳ ಕರೆದುಕೊಂಡಿತು. ಬರಸಿಡಿಲಂತೆ ಬಂದೆರಗಿದ್ದ ಕಷ್ಟವನ್ನ, ಪರಮ್ ಶ್ರಮ ತೊಳೆದುಹಾಕಿತ್ತು. ನೆನ್ನೆಯ ನಿರ್ಧಾರಕ್ಕೆ ಕೊಂಚ ಕೈಜೋಡಿಸಿದ್ದರು ಆಗುತಿದ್ದ ಅನಾವುತಕ್ಕೆ ಎದರಿ. ಪರಮ್ ಆಫೀಸ್ ಒಳಹೊಕ್ಕ. ಬಂದೊದಗುವ ಕಷ್ಟಗಳಿಗೆ ಕುಗ್ಗದೆ ಕೂತು ಯೋಚಿಸಬೇಕೆಂದು ಅವನ ಮನಸ್ಸು ಸಾರಿ ಸಾರಿ ಹೇಳಿತ್ತು.
 
ಅರಿಯಬೇಕಿರುವುದು ಇಷ್ಟೇ, ಕಷ್ಟ ಕಣ್ಮರೆಯಾಗುತ್ತದೆ! ಕಗ್ಗತ್ತಲ ಕೊನೆಯಲ್ಲಿ ಬೆಳಕೊಂದು ಕಾದು ಕುಳಿತಿರುತ್ತದೆ. ನಾವು ಕಾಯಬೇಕಷ್ಟೇ. ಕಂಪನಿಗಳು ಕೈಬಿಡಬಹುದು, ಕಲಿತ ಕೆಲಸವಲ್ಲ! ಆಗಂತುಕನಂತೆ ಎದುರಾಗುವ ಕಷ್ಟಗಳನ್ನು ಎದುರಿಸೋಣ... ಸೋತು ನಿಂತಾಗ ಕಾಡುವ ನೋವುಗಳಿಗೆ ನೀರೆಯದೆ, ಕಾದು ಕನಸ ಕೈಗೂಡಿಸಿಕೊಳ್ಳುವುದು ಜಾಣ್ಮೆ.

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...