Friday, March 15, 2024

ಮಸಾಜಲ್ಲೂ ಅರಳಿದ ಮಾನವತೆ

 ಅದು ಕಡಲ ತೀರಗಳಿಂದ ಕಂಗೊಳಿಸುವ ರಾಜ್ಯ, ಅಲ್ಲಿನ ಊಟಕ್ಕೆ, ನೋಟಕ್ಕೆ ಶರಾಬಿಗೆ ಸೋಲದವರೇ ಇಲ್ಲ! ಪಾಶ್ಚ್ಯತ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಈ ನೆಲದಲ್ಲಿ ಕಣ್ತೆರೆದಷ್ಟು ಕಾಣುವುದು ಕಡಲು ಮತ್ತು ಕನ್ಯೆಯರು. ಇಲ್ಲಿ ಎಲ್ಲರ ದರವೂ ಕಡಿಮೆ, ಮತ್ತೆಲ್ಲ ಕಾನೂನು ಬದ್ದ, ಇದು ಗೋವಾ! ದಕ್ಷಿಣದಿಂದ, ಉತ್ತರದಿಂದ, ಪಾಶ್ಚಾತ್ಯದಿಂದ ಬರುವ ಅದೆಷ್ಟೋ ಪ್ರವಾಸಿಗರಿಗೆ ಇದು ಸ್ವರ್ಗ.
 
ಫೆಬ್ರವರಿ ತಿಂಗಳ ಮಧ್ಯದಲ್ಲಿ ಗೋವಾತಲುಪಲು ಸಿದ್ಧತೆ ನಡೆಸಿದ್ದ ಆ ಪ್ರವಾಸಿಗರ ಪ್ರಯಾಣ ಮೈಸೂರಿಂದ ಮೊದಲುಗೊಂಡು, ಮಂಗಳೂರಿನ ಪಬ್ಬಾಸ್ ಐಸ್ಕ್ರೀಮ್ ಸವಿದು, ಮರವಂತೆಯಲ್ಲಿ ಮೈಮರೆತು, ಮುರುಡೇಶ್ವರನ ಮಡಿಲಲ್ಲಿ ಮಿಂದು, ಗೋಕರ್ಣದ ಆತ್ಮಲಿಂಗವ ಅಪ್ಪಿ, ಕಾರವಾರದ ಕಡಲತೀರ ದಾಟಿ ಗೋವಾ ತಲುಪಿತ್ತು. ಅದು ವಾರದ ಮದ್ಯದ ದಿನ, ಎಲ್ಲರು ತಂತಮ್ಮ ಲ್ಯಾಪ್ಟಾಪ್ಗೆ ಅಂಟಿಕೊಂಡು ಕೆಲಸ ಕರಗಿಸಿ ಸಮಯಸಿಕ್ಕಾಗ ಬೀಚು! ಬೀರು!
 
ಪ್ರಯಾಣದ ದಣಿವರಿಸಲು, ಮಸಾಜಿನ ಮೊರೆಹೋಗಬೇಕೆಂದಿದ್ದ ಸದಸ್ಯನೊಬ್ಬ ಶನಿವಾರ ಬೆಳಿಗ್ಗೆ ಥಾಯ್ ಸ್ಪಾ ಹೊಕ್ಕು ಮಸಾಜಿಗೆ ಮೈಹೊಡ್ಡಿ ಮಲಗಿದ್ದ, ಮಸಾಜು ಮಾಡಲು ಬಂದಾಕೆ ಇಪ್ಪತ್ತರ ಹರೆಯದ ಅಂದಗಾತಿ, ಆಕೆಗೆ ಹಲವು ಗ್ರಾಹಕರಂತೆ ಈತನು ಒಬ್ಬ. ಸ್ಪಾನ ಮಂದಬೆಳಕು, ಮುಖದಲ್ಲಿದ್ದ ಮಾಸ್ಕ ಆಕೆಯ ಮುಖವನ್ನು ಕಾಣಲು ಬಿಡಲಿಲ್ಲ, ಕಣ್ಗಳ ಕಾಂತಿಮಾತ್ರ ಆಕೆಯ ಸೌಂದರ್ಯ ಸಾರುತ್ತಿದ್ದವು.
 
ಆಕೆ ಎಣ್ಣೆ ಅದ್ದಿದ ಕೈಗಳಿಂದ ಮಸಾಜು ಸುರುವಿಟ್ಟಿದ್ದಳು. ಅಲ್ಲಿದ್ದ ಮೌನ, ಮಂದಬೆಳಕು, ಮಸಾಜು ಆತನಿಗಿನ್ನು ನಿದ್ದೆ ತಂದಿರಲಿಲ್ಲ. ಆಕೆಯನ್ನು ಮಾತಿಗೆಳೆಯಲು, ಆತನೇ ಸುರುವಿಟ್ಟು ನಿನ್ನ ಹೆಸರೇನು ಎಂದು ಪಿಸುಗುಟ್ಟಿದ. ಅಲ್ಲಿದ್ದ ಮೌನಕ್ಕೆ, ಆ ಪಿಸುಮಾತು ಪ್ರತಿಧ್ವನಿಸಿ, ಆಕೆಯಿಂದ ಬಂದ ಉತ್ತರ ಜಾನು! (ಇಬ್ಬರ ಹೆಸರು ಬದಲಿಸಿದೆ, ಇಬ್ಬರ ವೃತ್ತಿ, ವ್ಯಕ್ತಿತ್ವ ಮತ್ತು ಗೌರವಕ್ಕೆ ಯಾವುದೇ ಧಕ್ಕೆಬರದಂತೆ ಹೆಣೆದ ಕಥೆಯಿದು, ಇಲ್ಲಿಂದ ನಮ್ಮ ಕಥಾ ನಾಯಕನನ್ನು ಜಾನ್ ಎಂದು ಊಹಿಸಿಕೊಳ್ಳಿ).
ಜಾನ್: ನಿಮ್ಮೂರು?
ಜಾನು: ಉತ್ತರ ನೀಡಿದಳು (ಆಕೆ ಬಹುದೂರದಿಂದ ಬಂದು ಗೋವದಲ್ಲಿ ವೃತ್ತಿಗಾಗಿ ನೆಲೆಸಿದ್ದರು)
ಜಾನ್: ಈ ಕೆಲಸದ ತರಬೇತಿ?
ಜಾನು: ಮುಂಬೈಯಲ್ಲಿ ತರಬೇತಿಯಾಗಿದೆ
ಜಾನ್: ಅಷ್ಟು ದೂರದಿಂದ ಇಲ್ಲಿ ಬಂದು ಕೆಲಸ ಮಾಡುವ ಕಾರಣ (ಆಕೆಗಿದು, ಯಾವ ಗ್ರಾಹಕರು ಕೇಳಿರದ ಪ್ರಶ್ನೆ)
ಜಾನು: ವಿಚಲಿತಳಾಗದೆ, ಆಕೆ ಉತ್ತರ ವಿತ್ತಳು
 
ಜಾನ್ ಕೇಳುತ್ತಾ ಹೋದ, ಆತನ ಆತ್ಮೀಯತೆಯ ಮಾತಿಗೆ, ಆಕೆ ಮಾತಾದಳು, ಮಗುವಾದಳು, ತನ್ನೆಲ್ಲ ಕಥೆ ಹೇಳಿ ಕಣ್ಣೀರಾದಳು.
 
ಜಾನು ಹುಟ್ಟಿಬೆಳೆದದ್ದು ಉತ್ತರದ ದೂರದ ರಾಜ್ಯದಲ್ಲಿ, ಆಕೆಯದು ಮಧ್ಯಮವರ್ಗದ ಕುಟುಂಬ, ತಂದೆ ಅಕಾಲಿಕ ಮರಣಹೊಂದಿದ್ದರೆ, ತಾಯಿ ಜಾನುವಿನ ತಮ್ಮನ ಜವಾಬ್ದಾರಿಹೊತ್ತು ಅಕ್ಷರ ಕಲಿಸುತ್ತಿದ್ದಾರೆ. ತಂದೆಯ ಮರಣಾನಂತರ ಅನಾಯಾಸವಾಗಿ ಮನೆಯ ಜವಾಬ್ದಾರಿ ಬಿದ್ದದ್ದು ಮಗಳ ಹೆಗಲಮೇಲೆ, ಜಾನು ಪದವೀಧರೆ, ಹಳ್ಳಿಯ ಭಾಗದಿಂದ ಬಂದವಳು, ಅಷ್ಟೇನು ಕಂಪ್ಯೂಟರ್, ಇಂಗ್ಲಿಷ್ ಜ್ಞಾನವಿಲ್ಲ. ಸಂಬಂಧಿಕರ ಸಲಹೆಯಂತೆ, ಆಕೆಯ ಕೈಹಿಡಿದದ್ದು ಮಸಾಜ್ ಥೆರಪಿಸ್ಟ್ ಕೋರ್ಸ್ ಮತ್ತದರಿಂದ ದೊರೆತ ಕೆಲಸ. ಈಕೆಯ ಸಂಬಳದಿಂದಲೇ ತಾಯಿಯ ಜೀವನ, ತಮ್ಮನ ವಿದ್ಯಾಭ್ಯಾಸ ಸಾಗಬೇಕು.
ಜಾನ್: ಕೆಲಸದ ಒತ್ತಡ?
ಜಾನು: ವಾರಾಂತ್ಯ ಬಿಟ್ಟರೆ, ಬೇರೆ ದಿನ ಅಷ್ಟೇನು ಒತ್ತಡವಿಲ್ಲ
ಜಾನ್: ಇಲ್ಲಿ ಏನಾದರು ಅತಾಚುರ್ಯ ನಡೆದರೆ? ಗ್ರಾಹಕರು ತಪ್ಪಾಗಿ ವರ್ತಿಸಿದರೆ
ಜಾನು: ಹಾಗೇನು ಇಲ್ಲ, ಇಲ್ಲಿರುವ ಬೌನ್ಸರ್ಸ್ ಯಾವುದೇ ಅತಾಚುರ್ಯಕ್ಕೆ ಅವಕಾಶ ಕೊಡುವುದಿಲ್ಲ, ಗ್ರಾಹಕರು ತಪ್ಪಾಗಿ ವರ್ತಿಸಿ ನಾವು ಸಹಾಯಕ್ಕಾಗಿ ಕೂಗಿದರೆ, ಕ್ಷಣಾರ್ಧದಲ್ಲಿ, ಗ್ರಾಹಕ ಜೈಲುಪಾಲಾಗಿರುತ್ತಾನೆ
ಜಾನ್: ಸ್ಪಾನ ಮಾಲೀಕರು ನಿಮ್ಮನ್ನು ನೋಡಿಕೊಳ್ಳುವು ಬಗೆ
ಜಾನು: ಮಾಲೀಕರು, ನಮಗೆ ಬೇಕಾದ ಎಲ್ಲ ಸೇಫ್ಟಿ ಮೆಸರ್ಸ್ ಇಟ್ಟಿದ್ದಾರೆ, ಇಲ್ಲೇನು ತೊಂದರೆ ಇಲ್ಲ.
ಮಸಾಜಿನೊಂದಿಗೆ ಇಬ್ಬರ ಮಾತು ಮುಗಿದಿತ್ತು
 
ಸ್ಪಾಯಿಂದ ಹೊರಬಿದ್ದ ಜಾನ್ ಗೆ, ಅದೆಷ್ಟೋಬಾರಿ ಅದ್ಭುತವಾಗಿ ಕಂಡಿದ್ದ ಗೋವಾ, ಅಲ್ಲಿನ ಬೀಚು, ಬಿಯರು, ಯಾವುದು ಅಂದವೆನಿಸಲಿಲ್ಲ. ಅಲ್ಲಿನ ರೆಸ್ಟೋರೆಂಟ್ಗಳಲ್ಲಿ, ಮಾಲ್ಗಳಲ್ಲಿ, ಪಬ್ಗಳಲ್ಲಿ ದುಡಿವ ಹೆಣ್ಮಕ್ಕಳೆಲ್ಲ ಜಾನುವಿನಂತೆಯೇ ಕಂಡರೂ, ಅವಳಂತೆಯೇ! ಇವರೆಲ್ಲರಿಂದೆ ಯಾವ ಕಥೆಗಳಿವೆ, ಎಲ್ಲ ಮರೆತು, ಹೇಗೆ ನಕ್ಕಾರೆಂಬ ಪ್ರಶ್ನೆಗಳಲ್ಲಿ, ಜಾನುವಿನ ಕಥೆಯಲ್ಲಿ, ಅವಳ ಕಣ್ಣೀರಲ್ಲಿ ಗೋವಾದ ಕಲರ್ಸ್ ಕರಗಿಹೋಗಿದ್ದವು. ಇದೆ ಗುಂಗಲ್ಲಿ, ಸಂಜೆ ಒಂದೆರಡು ಬಿಯರ್ ಇಳಿಸಿ, ನಿದ್ದೆಗೆ ಜಾರಿದ. ಮರುದಿನ ಬೆಳಿಗ್ಗೆ ಎದ್ದವನೇ ಏನೋ ಸಂಚಲನವಾದಂತೆ ರೆಡಿಯಾದ ಜಾನ್, ತಿಂಡಿತಿಂದು ಮರಳಿದ್ದು ಅದೇ ಸ್ಪಾಗೆ, ಜಾನುವಿನ ದರ್ಶನಕ್ಕಾಗಿ. ಸ್ಪಾದ ಮ್ಯಾನೇಜರ್ ಜೊತೆ ಮಾತನಾಡಿ ಮಸಾಜಿನ ಫೀ ಇತ್ತು, ಇಂದು ಮಸಾಜಿಗೆ ಮೈಹೊಡ್ಡಲು ಜಾನು ಬೇಕೆಂದು ತಿಳಿಸಿ ಆಕೆಯ ಬರುವಿಕೆಗಾಗಿಕಾದ ಜಾನ್. ಕಪ್ಪು ಸಮವಸ್ತ್ರ, ಕನ್ನಷ್ಟೇ ಕಾಣುವಂತೆ ಮುಖವನ್ನು ಮುಚ್ಚಿದ್ದ ಮಾಸ್ಕಧರಿಸಿ ಬಂದ ಜಾನು, ಕಂಡದ್ದು ನೆನ್ನೆಯ ಪ್ರೀತಿಯ ಕೇಳುಗ, ಮನಬಿಚ್ಚಿಮಾತನಾಡಿ ಮಗುವಾಗಿಸಿ ಮನ್ನಣೆಗಳಿಸಿದ್ದ ಗ್ರಾಹಕ. ಆಕೆ ಪರಿಚಯದ ನಗೆ ಬೀರಿ, ಉಭಯಕುಶಲೋಪರಿಸಾಂಪ್ರತ ಮಾತನಾಡಿಸಿದಳು. ಜಾನ್, ಆಕೆಗಾಗಿ ತಂದಿದ್ದ ಚಾಕಲೇಟ್, ಹೂಗುಚ್ಛ ನೀಡಿದ. ಆಕೆಗೆ ಅದು ಸ್ವರ್ಗ ಸುಖ! ಅಲ್ಲಿಯ ತನಕ ಗೋವಾದಲ್ಲಿ ಆಕೆ ನೋಡಿದ್ದ ಅದೆಷ್ಟೋ ಗ್ರಾಹಕರಿಗೆ ಅವಳೊಬ್ಬ ಸುಂದರಿ ಅಷ್ಟೇ, ಯಾರಿಂದಲೂ ಸವಿಮಾತು, ಸನ್ನಡತೆಯ ಸವಿಯನ್ನೇ ಸವಿಯದ ಜಾನು, ಜಾನ್ ನ ಈ ಪ್ರತಿಕ್ರಿಯೆಯಿಂದ ಸ್ವರ್ಗ ಸುಖದಲ್ಲಿ ತೆಲಾಡುತ್ತ ಕ್ಷಣಾರ್ಧ ಮೈಮರೆತಳು. ಜಾನ್ ನ ಈ ಪ್ರತಿಕ್ರಿಯೆಯಿಂದ ಜಾನುವಿನ ಕಣ್ಣಾವೆಗಳಲ್ಲಿ ಹರಿದದ್ದು ಆನಂದಬಾಷ್ಪ! ಕ್ಷಣಾರ್ಧದಲ್ಲಿ ತನ್ನ ವೃತ್ತಿಯ ಜವಾಬ್ದಾರಿ ಅರಿವಾಗಿ ಜಾನು ಮಸಾಜ್ ಮಾಡಲು ಸಜ್ಜಾದಳು, ಜಾನ್ ಇಂದು ಮಸಾಜ್ ಬೇಡವೆಂದು ತಿಳಿಸಿ, ಇಲ್ಲಿಗೆ ಬಂದದ್ದು ನಿಮ್ಮನ್ನು ಕಂಡು, ಶುಭಹಾರೈಕೆಯೊಂದ ತಿಳಿಸಿ ನಿಮ್ಮ ಬದುಕು ಬೆಳಕಾಗಲೆಂದು ಹಾರೈಸಲು, ರಿಸೆಪ್ಶನ್ ಅಲ್ಲಿ ಕಟ್ಟಿದ ಹಣ ನಿಮ್ಮನ್ನು ಕಾಣಲು ಅಷ್ಟೇ ಎಂದು ಆಕೆಯ ಕೈಗೊಂದಿಷ್ಟು ಹಣವನ್ನಿಟ್ಟು ಅದನ್ನು ಅಮ್ಮನಿಗೂ, ತಮ್ಮನ ವಿದ್ಯಾಭ್ಯಾಸಕ್ಕೂ ಬಳಸಬೇಕೆಂದು ತಿಳಿಸಿದ. ಆಗಂತುಕ ತೋರಿದ ಕಾಳಜಿಗೆ ಜಾನು ಕರಗಿಹೋಗಿದ್ದಳು, ಕಣ್ಣಷ್ಟೇ ಕಾಣುತಿದ್ದ ಆ ಮುಖದಲ್ಲಿ ಮಾನವತೆಯೊಂದಿಗೆ ಬೆರೆತ ಮಂದಹಾಸವಿತ್ತು. ಜಾನ್, ಜಾನುವಿನ ಭವಿಷ್ಯಕ್ಕೆ ಬಂಗಾರದಂತಹ ಶುಭಕಾಮನೆಗಳ ತಿಳಿಸಿ ಮೆಟ್ಟಿಲಿಳಿದು ಮರೆಯಾಗಿದ್ದ…
 
ನಮ್ಮ ನಿಮ್ಮೆಲ್ಲರ ದಿನಚರಿಗಳಲ್ಲಿ, ಓಡಾಡುವ ಸ್ಥಳಗಳಲ್ಲಿ ಅದೆಷ್ಟೋ ಮಹಿಳಾ ಕಾರ್ಮಿಕರ, ಉದ್ಯೋಗಿಗಳ ಒಡನಾಟ ಇದ್ದದ್ದೇ, ಇವರಲ್ಲಿ ಬಹುಪಾಲು ಬಡ-ಮಧ್ಯಮ ವರ್ಗದ ಮಹಿಳೆಯರೇ ಹೆಚ್ಚು, ಅವರಲ್ಲಿ ಹಲವರ ವೃತ್ತಿ, ಕೆಲಸ ಆ ಹೆಣ್ಣುಮಕ್ಕಳ ಪರಿಸ್ಥಿತಿ ಮತ್ತು ಬದುಕಿನ ಅವಶ್ಯಕತೆಯೇ ವಿನಃ, ಅದು ಅವರ ಆಯ್ಕೆಯಾಗಿರುವುದಿಲ್ಲ. ಅವುಡುಗಚ್ಚಿ, ಮನಸ್ಸಿನ ಭಾರವನ್ನೆಲ್ಲ ಮರೆತು ಮಂದಹಾಸನೀಡುತ್ತಾ ದುಡಿಯುತ್ತಿರುತ್ತಾರೆ. ಅಂತಹ ಮಹಿಳಾ ಕಾರ್ಮಿಕರು ಎದುರಾದಾಗ ನಾವು-ನೀವೆಲ್ಲ ಮಂದಹಾಸದ ಮುಗುಳುನಗೆಯೊಂದ ಬೀರಿ ಗೌರವಿಸೋಣ. ಒಮ್ಮೆ ಯೋಚಿಸಿ ಜಾನು ನಮ್ಮ-ನಿಮ್ಮೆಲರ ನಡುವೆಯೂ ಇರಬಹುದು.
 
ಕೊನೆಯದಾಗಿ, ಓದುಗರ ಭಾವದಲ್ಲಿ ಜಾನುವಿನ ಕಥೆ ಇಷ್ಟೇನಾ ಎನ್ನುವ ಪ್ರಶ್ನೆಯೂ ಮೂಡಬಹುದು, ಆದರೆ ಆಕೆಗಿದ್ದ ಸಮಯ ಮತ್ತು ವೃತ್ತಿಯ ಜವಾಬ್ದಾರಿಗಳ ನಡುವೆ ಒಬ್ಬ ಹೆಣ್ಣುಮಗಳು ಅಪರಿಚಿತನೊಂದಿಗೆ ಎಷ್ಟು ಮಾತಾಗಬಹುದು, ಎನ್ನುವ ಇತಿಮಿತಿಯಲ್ಲಿ ಈ ಕಥೆಸಾಗಿದೆ. ಜಾನುವಿನ ಭವಿಷ್ಯಕ್ಕೆ ಭದ್ರ ಭೂನಾದಿ ಹಾಕಬೇಕೆಂಬ ಕನಸುಗಳೊಂದಿಗೆ ಜಾನ್ ಮಾತುಮುಗಿಸಿದ್ದ, ನಾನು ಕಾದಿದ್ದೇನೆ ಜಾನುವಿನ ಮುಂದಿನಕಥೆ ನಿಮ್ಮಮುಂದೆ ತೆರೆದಿಡಲು.

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...