Monday, March 25, 2024

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ಮತ್ತು ನಿಂಗರಾಜಮ್ಮರವರ ಗರ್ಭಸಂಜಾತರಾದ ಶಾಂತಪ್ಪ. ಒಂದೂವರೆ ವರ್ಷದ ಮಗುವಿದ್ದಾಗ ಪೋಲಿಯೊ ಮಾರಿಗೆ ತುತ್ತಾಗಿ ಎರಡು ಕಾಲುಗಳ ಸ್ವಾದೀನ ಕಳೆದು ಕೊಂಡವರು. ಹಾಡಿ, ಕುಣಿದಾಡಿ ಬೆಳೆಯಬೇಕಿದ್ದ ಮಗು, ಪೋಲಿಯೊ ಎಂಬ ಮಹಾಮಾರಿಯ ಒಡೆತಕ್ಕೆ ಮಗ್ಗುಲಲ್ಲಿ ಮಲಗಬೇಕಾಯಿತು. ಕಾಲು ನಡೆಯಲಾಗದಿದ್ದರೇನಂತೆ, ಮಗು ಅಂದಗಾರ ಮತ್ತು ಸದಾ ಹಸನ್ಮುಖಿ. ಹುಟ್ಟಿನೊಡನೆ ಬಂದಿದ್ದ ಚಾತುರ್ಯ ಮತ್ತು ಚೆಲುವು ಶಾಂತಪ್ಪನವರನ್ನು ಎಲ್ಲರಿಗೂ ಆಕರ್ಷಿತರಾಗುವಂತೆ ಮಾಡಿತ್ತು.

 
ಬಾಲ್ಯದಲ್ಲೇ ಬಂದೊದಗಿದ್ದ ಕುಂದುಕೊರತೆಯ ಬಗ್ಗೆ ಚಿಂತಿಸದೆ ಶಾಂತಪ್ಪನವರು ವಿದ್ಯಾಭ್ಯಾಸದಲ್ಲಿ ತೊಡಗಿ, SSLC ಮುಗಿಸಿಕೊಂಡರು. ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲಾಗದೆ ಶಾಂತಪ್ಪ ಹಿಡಿದದ್ದು ಸಂಗೀತದ ದಾರಿ. ಸಂಗೀತಾಭ್ಯಾಸ ಸುರುವಿಟ್ಟ ಶಾಂತಪ್ಪನವರು ಹಾರ್ಮೋನಿಯಂ, ವಯಲಿನ್, ಕೀಬೋರ್ಡ್ ಜೊತೆಗೆ, ತಮಟೆ ಬಾರಿಸುವುದು ಮತ್ತು ಸುಶ್ರಾವ್ಯವಾಗಿ ಹಾಡುವುದನ್ನು ಕಲಿತರು. ಅವರ ನಿಷ್ಠೆಗೆ, ಶ್ರಮಕ್ಕೆ ಶಾರದೆ ಒಲಿಯದೇ ಇರಲಾಗಲಿಲ್ಲ.
 
ಬಯಸದೆ ಬಂದ ಬೇಗೆಯ ಬಗ್ಗೆ ತುಸುಹೆಚ್ಚು ಚಿಂತಿಸದೆ ಶಾಂತಪ್ಪನವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ತಮ್ಮಲ್ಲಿ ಬೆರೆತ ಸಂಗೀತವನ್ನು ಬಳಸಿಕೊಂಡರು. ಸಮಾನ ಮನಸ್ಕರನ್ನು ಒಟ್ಟುಗೂಡಿಸಿ "ವಚನ ಸಂಗಮ ಕಲಾವೃಂದ" ವೆಂಬ ತಂಡವೊಂದನ್ನು ಕಟ್ಟಿ ಅದನ್ನು ಮುನ್ನಡೆಸುತ್ತಿದ್ದಾರೆ.
 
ಥ್ರೀ ವೀಲರ್ ಸ್ಕೂಟರ್ ಹತ್ತಿ ಸುತ್ತಾಡುವ ಶಾಂತಪ್ಪನವರು, ತಮ್ಮ ಕೊರತೆಯ ಬಗ್ಗೆ ಕೊರಗಲಿಲ್ಲ. ಒಲಿದ ಸಂಗೀತ ದೇವಿಯನ್ನು ಆರಾಧಿಸುತ್ತ, ಸ್ವತಂತ್ರ ಬದುಕೊಂದನ್ನ ಕಟ್ಟಿಕೊಂಡಿದ್ದಾರೆ. ಇಂದು ಇವರು ಹಾಡಲು ಕೂತರೆ ತಲೆಬಾಗದ ಸಂಗೀತ ಪ್ರೇಮಿಗಳಿಲ್ಲ, ಹಾರ್ಮೋನಿಯಂ ಅಥವಾ ವಯಲಿನ್ ಹಿಡಿದರೆ ಈ ಸುಂದರನಿಗೆ ಸುಸ್ತಾಗುವುದೇ ಇಲ್ಲ, ಇವರ ಕೈ ಕೆಳಗಿಳಿಸೆಂದು ಕೇಳುವುದಿಲ್ಲ. ಚಾಮರಾಜನಗರ, ಟಿ ನರಸೀಪುರ, ಕೊಳ್ಳೇಗಾಲ, ಮಳವಳ್ಳಿ, ತಲಕಾಡು ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಶಾಂತಪ್ಪನವರ ಸಂಗೀತ ಸೇವೆ ಸದಾ ಹಸಿರು. ಇವರು ನಡೆಸಿಕೊಡುವ ಭಜನೆಗೆ ಆಶೀರ್ವದಿಸಿದ ಗುರುವರ್ಯರು ಹಲವರು.
 
ಶ್ರೀಮಠಗಳ ಹಾಗು ಸಾಮಾನ್ಯರ ಮನೆಗಳಲ್ಲಿ ನಡೆಯುವ ಅದೆಷ್ಟೋ ಸತ್ಕಾರ್ಯಗಳಲ್ಲಿ ಶಾಂತಪ್ಪನವರ ಹಾರ್ಮೋನಿಯಂ, ವಯಲಿನ್ ಗಂಟೆಗಟ್ಟಲೆ ನುಡಿಯುತ್ತದೆ, ಇವರ ಸಂಗೀತ ಸುಧೆ ಸಾಗರೋಪಾದಿಯಲ್ಲಿ ಸಾಗಿ ಎಲ್ಲರನ್ನು ರಂಜಿಸುತ್ತಿದೆ. ಹಾರ್ಮೋನಿಯಂ ಮುಂದೆ ಕುಳಿತ ಶಾಂತಪ್ಪನವರನ್ನು ವಿಷೇಶ ಸಮರ್ಥರು ಎಂದು ಎಣಿಸಲು ಅಸಾಧ್ಯ, ಇವರ ಅಂದ ಎದುರಿಗಿದ್ದವರನ್ನು ಹುಬ್ಬೇರಿಸದೆ ಇರಲಾರದು.
 
ಬಾಲ್ಯದಲ್ಲೇ ನೊಂದ ಇವರು ತಮ್ಮ ಕೊರತೆಯ ಬಗ್ಗೆ ಕೊರಗದೆ, ಗೆದ್ದು ತಮ್ಮ ಬದುಕನ್ನು ಸುಂದರವಾಗಿಸಿಕೊಂಡ ಸುಂದರ. ಸಮಾಜ ಅದೆಷ್ಟೋ ವಿಷೇಶ ಚೇತನರನ್ನು ಗಮನಿಸಿ ಉದ್ಧರಿಸದೆ, ದೇವರು-ದಿಂಡರನ್ನು ಬಯ್ಯುತ್ತ, ಹಣೆಬರಹವೇ ಇಷ್ಟೇಂದು ದೋಷಿಸಿ ದೋಷಿಗಳನ್ನಾಗಿಸುತ್ತದೆ. ಅಂತಹ ಎಷ್ಟೋ ಉದಾಹರಣೆಗಳ ನಡುವೆ ಶಾಂತಪ್ಪ ಶೈನಿಂಗ್ ಸ್ಟಾರ್, ಅವರ ನಗುಮೊಗ, ಸಾಧನೆ ಉಳಿದವರನ್ನು ಉದ್ಧರಿಸದೆ ಇರಲಾರದು. ದೈವವನ್ನು ದೊಷಿಸುತ್ತ ದುಃಖಿತರಾಗದೆ ದುಡಿದು, ಬೆಳೆದು ಹಲವರಿಗೆ ಅವಕಾಶವಿತ್ತು ಸ್ಪೂರ್ತಿಯ ಚಿಲುಮೆಯಾದ ಇವರು ನನಗಂತೂ ದೇವರಾಗೇ ಕಂಡರೂ.
 
ಶಾಂತಪ್ಪನವರ ಬದುಕು ನಾನು ಬರೆದಷ್ಟು ಸುಲಭವಲ್ಲ, ಪ್ರತಿ ಗೆಲುವಿಗೂ ಅವರು ಸಾಕಷ್ಟು ಶ್ರಮಿಸಿದ್ದಾರೆ, ನಮಗೂ-ನಿಮಗೂ ಕಡಿಮೆ ಸಮಯ ಬೇಡುವ ಬದುಕಿನ ಪ್ರತಿಮೆಟ್ಟಿಲು ಶಾಂತಪ್ಪರವರಿಂದ ಅಧಿಕವಾಗೇ ದುಡಿಸಿದೆ, ಆದರೆ ಅವರ ಸಾಧನೆ ಹಲವರ ಬಾಳಲ್ಲಿ ಬೆಳಕು ತರುವುದಂತೂ ಸತ್ಯ. ಆದ ತೊಂದರೆ, ಅನಾನುಕೂಲಗಳ ಬಗ್ಗೆ ಚಿಂತಿಸದೆ ಸಿಕ್ಕ ಅವಕಾಶಗಳನ್ನೂ ಬಳಸಿಕೊಂಡರೆ ಬಾಳು ಬೇಕಾಗುವುದು ಸತ್ಯವೆನ್ನುವುದಕ್ಕೆ ಶಾಂತಪ್ಪನವರು ನೈಜ ಉದಾಹರಣೆ. ಬನ್ನಿ ಶಾಂತಪ್ಪನವರ ಜೀವೋನೋತ್ಸಹಕ್ಕೆ, ಸಾಧನೆಗೆ ನಮ್ಮದೊಂದು ಸಲಾಮು ತಿಳಿಸೋಣ.

ಕೊಟ್ಟು, ಕನವರಿಸಲಿಲ್ಲ

ಹಿರಿಯರಿಗೆ ಈಗ 93 ಹರೆಯ, ಹುಟ್ಟಿ ಬೆಳೆದದ್ದು ಚಾಮರಾಜ ನಗರ ಜಿಲ್ಲೆಯ, ಹಳ್ಳಿಕೆರೆಹುಂಡಿಯಲ್ಲಿ, ವಿದ್ಯಾಭ್ಯಾಸ ಆಗಿದ್ದು ಟಿ ನರಸೀಪುರದ ವಿದ್ಯೋದಯ ವಿದ್ಯಾಸಂಸ್ಥೆಯಲ್ಲಿ. ವೃತ್ತಿಯಲ್ಲಿ ದೈಹಿಕ ಶಿಕ್ಷಕರು, 30ಕ್ಕೂ ಅಧಿಕ ವರ್ಷ ಸರ್ಕಾರಿ ಸೇವೆ ಸಲ್ಲಿಸಿ 1990 ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವಯೋ ನಿವೃತ್ತಿಹೊಂದಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
 
ಭಾರತೀಯ ಸೇವಾದಳದ ಸದಸ್ಯರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ತಂಡದ ಮುಖ್ಯಸ್ಥರಾಗಿ ಹಲವಾರು ವರ್ಷ ಮೈಸೂರಿನ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಇವರ ಹೆಮ್ಮೆ. 1971 ರಲ್ಲಿ ಇವರು ಭಾರತೀಯ ಸೇವಾದಳದ ಸದಸ್ಯರಾಗಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಇವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
 
ಇವರ ಹೆಸರು H B ಶಂಭಪ್ಪ, ಮಾಸ್ಟರ್ ಶಂಭಪ್ಪ ಎಂದೇ ಖ್ಯಾತನಾಮರು. ಸರ್ಕಾರಿ ಸೇವೆಯೊಂದಿಗೆ ಸಾಹಿತ್ಯ ಸೇವೆಯನ್ನು ಮಾಡಿ ಕನ್ನಡಮ್ಮನಿಗೆ ಮತ್ತು ಸಾಹಿತ್ಯ ಅಭಿಮಾನಿಗಳಿಗೆ ಉಣಬಡಿಸಿದ್ದಾರೆ. ಹಾಡುಗಳ ರಚನೆ, ಕಥೆ, ಹಾಡು ಬರೆಯುವುದು, ಹಾಡುಗಾರಿಕೆ ಇವರ ಹೆಮ್ಮೆ, ಜೊತೆಗೆ ಇವರೊಬ್ಬ ಉತ್ತಮ ವಾಗ್ಮಿಯು ಹೌದು.
 
ವೈವಾಹಿಕ ಜೀವನದೊಂದಿಗೆ ಇವರು ನೆಲೆಸಿದ್ದು ಮಳವಳ್ಳಿ ತಾಲೂಕಿನ, ಚಿಕ್ಕಬಾಗಿಲು ಗ್ರಾಮದಲ್ಲಿ, ಸಮಾಜಸೇವೆಯನ್ನು ಉಸಿರಾಗಿಸಿಕೊಂಡ ಇವರು, ನಿವೃತ್ತ ಜೀವನದಲ್ಲು ಹಳ್ಳಿಯ ವಿದ್ಯಾರ್ಥಿಗಳ ಶ್ರೇಯೋಭಿಲಾಷೆಗೆ ಶ್ರಮಿಸುತ್ತಾ, ತಮ್ಮ ಪ್ರತಿ ಹುಟ್ಟುಹಬ್ಬವನ್ನು ಚಿಕ್ಕಬಾಗಿಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ನೀಡಿ, ಊಟದ ವ್ಯವಸ್ಥೆ ಮಾಡುವುದರೊಂದಿಗೆ ಆಚರಿಸುತ್ತಾರೆ. ಅಲ್ಲದೆ SSLC ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ.
 
ವೃತ್ತಿಗಾಗಿ ಅನೇಕ ಊರು, ನಗರಗಳಲ್ಲಿ ನೆಲೆಸಬೇಕಾದ ಅವಶ್ಯಕತೆ ಉಂಟಾದರೂ ಹುಟ್ಟಿ ಬೆಳೆದ, ಬದುಕಿದ ಊರಿನ ನೆಂಟು ಬಿಡದೆ ಬದುಕಿದ್ದು ಇವರ ಹಿರಿಮೆ. ಹುಟ್ಟೂರಾದ ಹಳ್ಳಿಕೆರೆಹುಂಡಿಯಲ್ಲಿ, ಸರ್ಕಾರಿ ಶಾಲೆಯಿಲ್ಲದೇ ಅಲ್ಲಿನ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ದೂರದ ಕಾರಾಪುರ ಗೇಟ್ನಲ್ಲಿರುವ JSS ಸಂಸ್ಥೆಯ ಶಾಲೆಗೇ ಕಾಲ್ನಡಿಗೆಯಲ್ಲೇ ತೆರಳುವುದನ್ನು ಗಮನಿಸಿ, ಮಾಸ್ಟರ್ ಶಂಭಪ್ಪನವರು ತಮ್ಮ ಆಸ್ತಿಯಲ್ಲಿ, 10 ಗುಂಟೆಯನ್ನು 2016 ನೇ ಇಸವಿಯಲ್ಲಿ  ಸರ್ಕಾರಿ ಶಾಲೆತೆರೆಯಲು ದಾನವಾಗಿ ನೀಡಿದ್ದಾರೆ. ಸರ್ಕಾರ ಇಲ್ಲಿ ಶಾಲೆ ತೆರೆದು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬೇಕಿರುವುದು ಬಾಕಿ ಇದೆ.
 
ಮಾಸ್ಟರ್ ಶಂಭಪ್ಪ ತಾವು ನೀಡಿದ ಕೊಡುಗೆಯ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ, ಯಾರೊಡನೆಯೂ ಮಾಹಿತಿ ಹಂಚಿಕೊಂಡಿಲ್ಲ, ಎಡಗೈಯಲ್ಲಿ ನೀಡಿದ ದಾನ ಬಲಗೈಗೆ ತಿಳಿಯದಂತೆ ಬದುಕಿದ್ದಾರೆ, ಇದು ಅವರ ಹೆಚ್ಚುಗಾರಿಕೆ. ಶಾಲೆಗಾಗಿ ಜಮೀನು ದಾನ ಪಡೆದ ಅಧಿಕಾರಿಗಳಾಗಲಿ ಅಥವಾ ಸಂಬಂಧ ಪಟ್ಟವರಾಗಲೀ ಮಾಸ್ಟರ್ ಶಂಭಪ್ಪನವರಿಗೆ ಯಾವುದೇ ಗೌರವ ಸೂಚಿಸುವ ಗೋಚಿಗೆಹೋಗಿಲ್ಲ. (ಇದರ ಬಗ್ಗೆ ಮಾಸ್ಟರ್ ಶಂಭಪ್ಪನವರಿಗೆ ಯಾವುದೇ ಚಿಂತೆಯಿಲ್ಲ. ಇದು ನನ್ನ ಅಂಬೋಣವೇ ವರತು, ಶಂಭಪ್ಪನವರ ಅಭಿಪ್ರಾಯವಲ್ಲ, ದಯಮಾಡಿ ಇದು ಅವರ ವಯಕ್ತಿಕ ಅಭಿಪ್ರಾಯವೆಂದು ಯಾರು ಭಾವಿಸಬಾರದೆಂದು ನನ್ನ ಕೋರಿಕೆ).
 
ಸರ್ವಜ್ಞರು ನುಡಿದಂತೆ,
ಕೊಟ್ಟು ಕುದಿಯಲು ಬೇಡ |
ಕೊಟ್ಟಾಡಿ ಕೊಳಬೇಡ |
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ |
ಕಟ್ಟಿಹುದು ಬುತ್ತಿ ಸರ್ವಜ್ಞ ||
 
ಕೊಟ್ಟು ಅದರ ಬಗ್ಗೆ ಎಲ್ಲಿಯೂ ಚಕಾರವೆತ್ತದೆ, ಇದಕ್ಕೆ ಸಲ್ಲಬೇಕಾದ ಯಾವ ಗೌರವಾದರಗಳನ್ನು ಸ್ವೀಕರಿಸದೆ. ಕೊಟ್ಟು ಕನವರಿಸದೇ ಇರುವುದು ಇವರ ದೊಡ್ಡತನ.
 
ನಾನು ನನ್ನದು, ನನ್ನವರಿಗಾಗಿ ಎಂದು ಕೂಡಿಡುವ ಅದೆಷ್ಟೋ ಮಂದಿಯ ನಡುವೆ ಮಾಸ್ಟರ್ ಶಂಭಪ್ಪನವರು ವಿಭಿನ್ನವಾಗಿದ್ದಾರೆ. ಬದುಕಿನ ಇಳಿ ಸಂಜೆಯಲ್ಲೂ ಇತರರಿಗಾಗಿ ಮಿಡಿವ ಇವರ ಬದುಕು, ಆದರ್ಶ, ಬದುಕಿದ ರೀತಿ ಅನೇಕರಿಗೆ ಸ್ಪೂರ್ತಿಯಾಗಲಿ ಎನ್ನುವುದು ನನ್ನ ಅಭಿಪ್ರಾಯ. ಸರ್ಕಾರವಾಗಲಿ, ಸರ್ಕಾರೀ ಅಧಿಕಾರಿಗಳಾಗಲಿ ಮಾಸ್ಟರ್ ಶಂಭಪ್ಪನವರಿಗೆ ಧನ್ಯವಾದ ತಿಳಿಸದಿದ್ದರೇನು, ನಾವು ನೀವು ಹಿರಿಯರಿಗೆ ಗೌರವ ಪೂರ್ವಕವಾಗಿ ನಮಿಸೋಣ. ಹಿರಿಯರಿಗೆ ಧನ್ಯವಾದ ತಿಳಿಸಿ ಹಾರೈಸಬೇಕೆಂದರೆ ಕರೆ ಮಾಡಿ: 9632674052

Friday, March 22, 2024

ಬದುಕಿಸಿತ್ತಾ ಬನ್ನೂರ ಬ್ರಿಡ್ಜ್

ಪರಮ್ ಕಷ್ಟಗಳೊಂದಿಗೆ ಬೆಳೆದ ಹುಡುಗ. ಹಳ್ಳಿಯ ಬದುಕು, ಮನೆಯ ಪರಿಸ್ಥಿತಿ ಕೃಷಿಯೊಂದಿಗಿನ ಒಡನಾಟ ಅವನನ್ನು ಶ್ರಮಜೀವಿಯನ್ನಾಗಿಸಿತ್ತು. ಪದವಿಮುಗಿಸಿ ಬೆಂಗಳೂರಿನಲ್ಲಿ ಕೆಲಸಗಿಟ್ಟಿಸಿಕೊಂಡಾತ ಹಗಲಿರುಳೆನ್ನದೆ ದುಡಿಯತೊಡಗಿದ, ಬೆಂಗಳೂರಿಗೆ ಬರುವ ಮೊದಲು ಮಳೆ-ಚಳಿ, ಬಿಸಿಲು ಬೆಂಕಿಯನ್ನದೆ ದುಡಿದಿದ್ದ ದೇಹವದು AC ರೂಮಿನ ಅಧಿಕ ಘಂಟೆಗಳ ಕೆಲಸ ಅವನಿಗೇನು ಹೊರೆಯೆನಿಸಲಿಲ್ಲ. ಕೆಲಸದ ಮೇಲಿದ್ದ ನಿಷ್ಠೆ, ಅವನ ಶ್ರಮ ಪರಮ್ ನನ್ನು ಬೆಳಿಸಲು ಹಿಂಜರಿಯಲಿಲ್ಲ. ಶ್ರಮ ಸಕ್ಸಸ್ ಎಡೆಗೆ ಹೆಜ್ಜೆ ಹಿಡಿಸಿತ್ತು.
 
ಬೆಂಗಳೂರೇ ಹಾಗೆ ಬಂದವರನ್ನೆಲ್ಲ ಬಂಧುವಾಗಿಸಿಕೊಳ್ಳುತ್ತದೆ. ಅದು ಅವಕಾಶಗಳ ಆಗರ, ದುಡಿಮೆಯನ್ನು ನಂಬಿದವರನ್ನೆಲ್ಲ ದುಡಿಸಿ ಬೆಳೆಸಿಕೊಳ್ಳುವುದು ಮಣ್ಣಿನ ಮಮತೆ.  ಅಂತೆಯೇ ಪರಮ್ ನನ್ನು ಬೆಂಗಳೂರು ಪ್ರೀತಿಯಿಂದ ಕೈಹಿಡಿದು ಬೆಳೆಸಿತ್ತು. ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡ ಪರಮ್, ತನ್ನೂರಲ್ಲಿ ತಂದೆ-ತಾಯಿಗೆ ಆಸರೆಯಾಗಿ ಅವರು ತಡವರಿಸದಂತೆ ಬದುಕುಸಾಗಿಸಲು ಸಹಕರಿಸುತ್ತಿದ್ದ. ಕಾಲ ಕಾಲಕ್ಕೆ ಏನೇನೋ ನಡೆಯಬೇಕೋ ಹಾಗೆ ಪರಮ್ ವಿವಾಹಿತನಾದ, ನವ ಜೋಡಿಗಳ ಮಡಿಲಲ್ಲಿ ಮಗುವೊಂದು ನಕ್ಕು ಪರಮ್ ನ ಸಂಸಾರವನ್ನು ಇನ್ನಷ್ಟು ಸುಖಿಯಾಗಿಸಿತ್ತು. ನನಗೆ ನೀನು-ನಿನಗೆ ನಾನು ಎಂದು ಕಷ್ಟ-ಸುಖಗಳಲ್ಲಿ ಹೆಗಲುಕೊಟ್ಟು ನಡೆಯುತ್ತಿದ್ದ ಕುಟುಂಬವದು.
 
ಕೆಲಸದ ನಿಮಿತ್ತ ಪರಮ್ ಬೆಂಗಳೂರಿನಿಂದ ಮೈಸೂರಿಗೆ ವರ್ಗಾಯಿತನಾದ. ಪರಮ್ ನ ಕಷ್ಟಕ್ಕೆ ಕರುಣೆ ಇಟ್ಟು ಬೆಳಿಸಿದ್ದ ಬೆಂಗಳೂರಿನ ಕಂಪನಿ ಬೀಳ್ಕೊಡುಗೆಯೊಂದಿಗೆ ಬಿಟ್ಟುಕೊಟ್ಟಿತ್ತು, ಮೈಸೂರಿನ ಹೊಸ ಆಫೀಸಿಗೆ ಬಂದಿಳಿದ ಪರಮ್ ತನ್ನ ಶ್ರಮ, ನಿಷ್ಠೆ ಮತ್ತು ಅಚ್ಚುಕಟ್ಟು ತನದೊಂದಿಗೆ ಕೆಲಸ ಸುರುವಿಟ್ಟ. ಹೊಸ ಜಾಗದಲ್ಲಿ ದಿನಗಳುರುಳಿ, ತಿಂಗಳಾಗಿ, ವರ್ಷಗಳಾದವು. ನುರಿತ ಅನುಭವದೊಂದಿಗೆ ಪ್ರೊಮೋಶನ್ಗಳು ಪರಮ್ ನ ಕೈಹಿಡಿದ್ದವು. ಆದರೂ ಪರಮ್ ಹೊಸ ಆಫೀಸಿಗೆ ಹೊರಗಿನವನಾಗೆ ಉಳಿದುಹೋಗಿದ್ದ. ಬೆಂಗಳೂರಿಂದ ಬಂದ ಬದಲಾವಣೆಯನ್ನು ಹೊಸ ಆಫೀಸು ಬರಮಾಡಿಕೊಂಡಿರಲಿಲ್ಲ, ಕಾರ್ಪೊರೇಟ್ ಪಾಲಿಟಿಕ್ಸ್ ಅನ್ನೋ ಭೂತ ಅವನನ್ನು ಬೆಂಬಿಡದೆ ಕಾಡುತಿತ್ತು.
 
ಕಾರ್ಪೊರೇಟ್ ಪಾಲಿಟಿಕ್ಸ್ ಅನ್ನೋ ಭೂತವೇ ಹಾಗೆ, ಅದಾವ ಕಾರಣಕ್ಕೆ ಹುಟ್ಟಿಕೊಳ್ಳುತ್ತದೆ ಎಂದೇಳಲು ಸಾಧ್ಯವಿಲ್ಲ! ಅದು ಬಾಷೆ, ಬಕೆಟ್ ಹಿಡಿವವರ ಹಿಂಡು, ಸೋಮಾರಿಗಳಿಡುವ ಸವಾಲು, ದೊಡ್ಡವರ ಸಣ್ಣತನ, ಮೈಕ್ರೋಮ್ಯಾನೇಜುಮೆಂಟ್, ಗುಂಡಿನ ಗ್ಯಾಂಗ್, ಡಿಮ್ಯಾಂಡಿಂಗ್ ಕ್ಲೈಂಟ್, ಕೆಲಸದ ಒತ್ತಡ ಹೀಗೆ ಅದಕ್ಕೆ ವಲ್ಲದ ಕಾರಣಗಳಿರಬಹುದು. ಕಾರ್ಪೊರೇಟ್ ಪಾಲಿಟಿಕ್ಸ್ ಕೊಲ್ಲದೆ ಕಾಡುವ ಭೂತ! ಇದು ಕೊಟ್ಟಷ್ಟು ಕಾಟ, ಹಿಂಡಿದಸ್ಟು ಜೀವ, ಬೇರಾವ ಜೀವಿಯು ಕೊಟ್ಟಿರಲಾರದು. ಇದರ ತೆಕ್ಕೆಗೆ ಬೀಳದೆ, ನೋಯದೆ ಗೆದ್ದಂತಹ ಕಾರ್ಪೊರೇಟ್ ಎಂಪ್ಲಾಯೀಸ್ ಸಿಗುವದೇ ಕಷ್ಟ. ಹೀಗೆ ಕಾರ್ಪೊರೇಟ್ ಪಾಲಿಟಿಕ್ಸ್ ವ್ಯೋಹಕ್ಕೆ ಸಿಕ್ಕ ಪರಮ್ ಪಡಬಾರದ ಕಷ್ಟ ಪಟ್ಟ. ಆದರೂ ಶ್ರಮ ಅವನ ಕೈಬಿಟ್ಟಿರಲಿಲ್ಲ. ಕಾಯಕವೇ ಕೈಲಾಸವೆಂದು ನಂಬಿದ್ದ ಪರಮ್, ಪರರ ಅಪವಾದಕ್ಕೆ, ದೊಡ್ಡವರ ಸಣ್ಣತನಕ್ಕೆ ತಲೆ ಕೆಡಿಸಿಕೊಳ್ಳದೆ, ತಾನಾಯಿತು ತನ್ನ ಕೆಲಸವಾಯಿತೆಂದು ಮುನ್ನಡೆದಿದ್ದ.
 
ಕೈಸೇರಿದ ಸ್ವಲ್ಪ ಹಣ ಮತ್ತು ಆದಾಯ ತೆರಿಗೆ ಉಳಿಸುವ ನೆಪದೊಂಗಿದೆ. ಪರಮ್ ತನ್ನ ಬದುಕಿನ ಮೈಲುಗಲ್ಲೊಂದ ಮುಟ್ಟಲು ಮನಸು ಮಾಡಿದ್ದ. ಮಿಸ್ಸೆಸ್ ಪರಮ್ ಮಡಿಲಲ್ಲಿ ಹೆಣ್ಣುಮಗುವಿನ ಆಗಮನ, ಅದರ ಅದೃಷ್ಟದೊಂದಿಗೆ ಪರಮ್ ಅರಮನೆ ನಗರಿಯಲ್ಲಿ ಮನೆಯೊಂದ ಖರೀದಿಸಿದ. ಅದು ಚೊಚ್ಚಲ ಕನಸು ಕೈಸೇರಿದ್ದ ಕಾಲ. ಮಿಸ್ಸೆಸ್ ಅಂಡ್ ಮಿಸ್ಟರ್ ಪರಮ್ ಹೊಸಮನೆಯ ಗೃಹಪ್ರವೇಶಕ್ಕೆ ಅಣಿಯಾಗುತ್ತಿದ್ದರು. ಅದು ವಾರಾಂತ್ಯ, ಪರಮ್ ಗೃಹ ಪ್ರವೇಶದ ಪತ್ರಿಕೆಯೊಂದಿಗೆ ಸ್ನೇಹಿತರು, ನೆಂಟರುಗಳನ್ನು ಆಮಂತ್ರಿಸಲು ಓಡಾಡುತ್ತಿದ್ದ, ಶುಭಕಾರ್ಯ ಇನ್ನೊಂದುವಾರವಷ್ಟೇ ಬಾಕಿಯಿತ್ತು. ಇನ್ವಿಟೇಷನ್ಸ್ ಕಾರ್ಡ್ಗಳೊಂದಿಗೆ ಓಡಾಡುತ್ತಿದ್ದ ಪರಮ್ ಗೆ ಆಫೀಸ್ ಇಂದ ಬಂದ ಕಾಲ್ ಆಘಾತ ತಂದಿತ್ತು.
 
ಕೇಕೆಹಾಕಿ ಕಾದಿದ್ದ ಕಾರ್ಪೊರೇಟ್ ಪಾಲಿಟಿಕ್ಸ್, ಪರಮ್ ನನ್ನು ಖೆಡ್ಡಕ್ಕೆ ಬೀಳಿಸಲು ಯಶಸ್ವಿಯಾಗಿತ್ತು. ಕಂಪನಿ ಹಿಂದೆಮುಂದೆ ಯೋಚಿಸದೆ ಪರಮ್ ನನ್ನು ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರ ಮಾಡಿಯಾಗಿತ್ತು. ಆಫೀಸ್ಇಂದ ಕರೆ, ಸೋಮುವಾರವೇ ಕಡೇ ದಿನ ಬಂದು ID ಕಾರ್ಡ್ ಲ್ಯಾಪ್ಟಾಪ್ ಸಬ್ಮಿಟ್ ಮಾಡಿ ಹೊರಡಬಹುದೆಂದು ಹೇಳಿ ಕರೆ ಕಟ್ಟಾಗಿತ್ತು. ವಿಷಯತಿಳಿದು ಮೈಸೂರಿನೆಡೆಗೆ ಹೊರಟ ಪರಮ್ ಬಂದು ನಿಂತದ್ದು ಬನ್ನೂರಿನ ಬ್ರಿಡ್ಜ್ ಮೇಲೆ. ಕಣ್ಣೆದುರಿಗೆ ಆಗಷ್ಟೇ ಮಾಡಿದ್ದ ಮನೆ ಸಾಲ, ಇನ್ನೊಂದುವಾರದಲ್ಲಿದ್ದ ಹೊಸ ಮನೆ ಗೃಹಪ್ರವೇಶ. ಕೈಜಾರಿದ್ದ ಕೆಲಸ, ಕಟ್ಟಬೇಕಿದ್ದ ಬ್ಯಾಂಕ್ EMI, ಸಾಲದ ಹೊರೆ, ತನ್ನದಲ್ಲದ ತಪ್ಪಿಗೆ ಕೈಜಾರಿ ಹೋಗಿದ್ದ ಕೆಲಸ, ಪರಮ್ ನ ಮುಂದಿನ ದಾರಿಯನ್ನು ಮಬ್ಬಾಗಿಸಿದ್ದವು. ಪರಿಸ್ಥಿತಿ ಕೈಮೀರಿದೆ ಮಾಡಿದ ಸಾಲಕ್ಕೆ ಮುಖ ಮಾಡಿನಿಲ್ಲುವುದೆಂತು, ಮನೆಯ ಗೃಹಪ್ರವೇಶಕ್ಕೆ ಬರುವ ನೆಂಟರಿಷ್ಟರ ಮಾತನಾಡಿಸುವುದೆಂತು ಎಂದು ಯೋಚಿಸಿ, ಆತ್ಮ ಹತ್ಯೆಯ ನಿರ್ಧಾರ ಮಾಡಿ ನಿಂತಿದ್ದು ಬನ್ನೂರಿನ ಬ್ರಿಡ್ಜ್ ಮೇಲೆ, ನೆಗೆಯುವುದಷ್ಟೇ ಬಾಕಿ. ಬಾರವಾದ ಹೃದಯ, ನೊಂದ ಮನಸು ಆತ್ಮ ಹತ್ಯೆಯನ್ನೇ ಬೆಂಬಲಿಸಿದ್ದವು. ಹರಿಯುತ್ತಿದ್ದ ಕಾವೇರಿ ನೋಡುತ್ತಾ ನಿಂತ ಪರಮ್ ನನ್ನು ಮನೆಯಲ್ಲಿದ್ದ ಹಸುಗೂಸು ಕೈಹಿಡಿದು ಜಗ್ಗಿದಂತಾಹಿತು. ಪರಮ್ ನ ಕಣ್ಣೀರಕೋಡಿ ನದಿತಟತಲುಪಿದ್ದವು. ಹಸುಗೂಸು ಪಿಸುಧ್ವನಿಯಲ್ಲಿ ಅಪ್ಪ ಎಂದಿತ್ತು.
 
 
ಕೆಲಸ ಹೋದರೇನಂತೆ, ಕೂಲಿ ಮಾಡಿದರಾಯಿತು, ಇಂದಲ್ಲ ನಾಳೆ ಇನ್ನೊಂದು ಕೆಲಸ ಸಿಕ್ಕಿತು, EMI ಕಟ್ಟಲು ಸಾಧ್ಯವಿಲ್ಲದಿದ್ದರೆ ಮನೆ ಮಾರಿದರಾಯಿತು ಎಂದು, ಬ್ರಿಡ್ಜ್ ನಿಂದ ಹಿಂದಡಿ ಇಟ್ಟ. ಕಣ್ಣೀರ ಒರೆಸಿ, ಮಡದಿ ಮಕ್ಕಳ ನೋಡಲು ಓಡೋಡಿ ಬಂದ, ಮನೆಗೆ ಮರಳಿ ಆಫೀಸ್ನ ಕಾಲ್, ಅದು ತಿಳಿಸಿದ್ದ ಸುದ್ದಿ ಮಡದಿಗೆ ಮುಟ್ಟಿಸಿದ. ಆಕೆ ಗಟ್ಟಿತಿತ್ತಿ ಆದದ್ದಾಗಲಿ ನೀವು ತಾಳ್ಮೆವಹಿಸಿ, ನಾಳೆ ಆಫೀಸಿಗೆ ಹೋಗಿ ಲ್ಯಾಪ್ಟಾಪ್ ಕೊಟ್ಟು ಬನ್ನಿ ಮುಂದೆ ನೋಡೋಣವೆಂದು ಸಮಾಧಾನಿಸಿ ಪರಮ್ ನ ಕೈಯಲ್ಲಿ ಕೂಸಿಟ್ಟಳು.
 
ಪರಮ್ layoff  ಸುದ್ದಿ ಅವನ ಜಾಗಕ್ಕೆ ಬೇರೊಬ್ಬನನ್ನು ನಿಯೋಜಿಸಿ, ಪರಮ್ ಮ್ಯಾನೇಜ್ ಮಾಡುತಿದ್ದ Client ಗಳಿಗೆ ಸುದ್ದಿ ಮುಟ್ಟಿಸಿದ್ದ ಇಮೇಲ್ ನೋಡಿದ ಕೂಡಲೇ, ಪರಮ್ ಕೆಲಸದ ಅರಿವಿದ್ದ Clients ತಮಗೆ ಪರಮ್ ಬೇಕೇ ಬೇಕೆಂದು ದುಂಬಾಲು ಬಿದ್ದಿದ್ದರು. ID ಕಾರ್ಡ್, ಲ್ಯಾಪ್ಟಾಪ್ ಕೊಟ್ಟು ಹೋಗಲು ಬಂದ ಪರಮ್ ನನ್ನು ಕಂಪನಿ ಆಗಿದ್ದ ಅತಾಚುರ್ಯಕ್ಕೆ ಕ್ಷಮೆಯಾಚಿಸಿ ಒಳ ಕರೆದುಕೊಂಡಿತು. ಬರಸಿಡಿಲಂತೆ ಬಂದೆರಗಿದ್ದ ಕಷ್ಟವನ್ನ, ಪರಮ್ ಶ್ರಮ ತೊಳೆದುಹಾಕಿತ್ತು. ನೆನ್ನೆಯ ನಿರ್ಧಾರಕ್ಕೆ ಕೊಂಚ ಕೈಜೋಡಿಸಿದ್ದರು ಆಗುತಿದ್ದ ಅನಾವುತಕ್ಕೆ ಎದರಿ. ಪರಮ್ ಆಫೀಸ್ ಒಳಹೊಕ್ಕ. ಬಂದೊದಗುವ ಕಷ್ಟಗಳಿಗೆ ಕುಗ್ಗದೆ ಕೂತು ಯೋಚಿಸಬೇಕೆಂದು ಅವನ ಮನಸ್ಸು ಸಾರಿ ಸಾರಿ ಹೇಳಿತ್ತು.
 
ಅರಿಯಬೇಕಿರುವುದು ಇಷ್ಟೇ, ಕಷ್ಟ ಕಣ್ಮರೆಯಾಗುತ್ತದೆ! ಕಗ್ಗತ್ತಲ ಕೊನೆಯಲ್ಲಿ ಬೆಳಕೊಂದು ಕಾದು ಕುಳಿತಿರುತ್ತದೆ. ನಾವು ಕಾಯಬೇಕಷ್ಟೇ. ಕಂಪನಿಗಳು ಕೈಬಿಡಬಹುದು, ಕಲಿತ ಕೆಲಸವಲ್ಲ! ಆಗಂತುಕನಂತೆ ಎದುರಾಗುವ ಕಷ್ಟಗಳನ್ನು ಎದುರಿಸೋಣ... ಸೋತು ನಿಂತಾಗ ಕಾಡುವ ನೋವುಗಳಿಗೆ ನೀರೆಯದೆ, ಕಾದು ಕನಸ ಕೈಗೂಡಿಸಿಕೊಳ್ಳುವುದು ಜಾಣ್ಮೆ.

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ. ಇರಲಿ ಅದಕ್ಕೊಂದು ನೀತಿ. ಭಾಗ - 2

ಆಕೆಯ ನಿರಾಕರಣೆಯೇನೋ ದ್ವೇಷ ಹುಟ್ಟಿಸುವ ಬದಲು, ಆತ ಬದುಕ ನೋಡುವ ದೃಷ್ಟಿಯನ್ನು ಬದಲಿಸಿತು ಆದರೆ ಪ್ರೀತಿಯ ತಿರಸ್ಕಾರದ ನೋವು ನರಳಿಸದೇ ಬಿಟ್ಟಿತೇ? ಅದರಲ್ಲೂ ಆತನದು ನಿಸ್ಕಲ್ಮಶ ಚೊಚ್ಚಲ ಪ್ರೀತಿ!
 
ಇತಿಹಾಸದುದ್ದಕ್ಕೂ ಬೇರಾವ ನಿರಾಕರಣೆ, ಸೋಲು ನೀಡದ ನೋವು, ಸಂಕಟ ನೀಡಿ ಗೆದ್ದಿರುವುದು ಪ್ರೀತಿಯೊಂದೇ ಎನ್ನಬಹುದೇನೋ, ಕಳೆದು ಕೊಂಡವನ ಕೊರಗು ಕೊನೆಮೊದಲಿಲ್ಲದ್ದು. ಅದರಲ್ಲೂ ಹದಿಹರೆಯದ ಎದೆಅಂಗಳದಲ್ಲಿ ಕನಸುಗಳಿಂದಲೇ ಕಟ್ಟಿದ ಪ್ರೀತಿಯ ಕೋಟೆ ಅದು, ಹಾಗು ತಿರಸ್ಕಾರವಾದ ಬಗೆಯಂತೂ ಆತನ ಎದೆಯನ್ನ ಬಗೆಬಗೆದು ಕೊಲ್ಲುತಿತ್ತು. ಅದೆಷ್ಟೋ ಉದಾಹರಣೆಗಳಲ್ಲಿ, ಪ್ರೀತಿಯ ಸೋಲು ಎಷ್ಟೋ ಯುವಕರಿಗೆ ಮದ್ಯದ ಮದಕ್ಕೂ ಸಿಗರೇಟಿನ ಸಂಗಡಕ್ಕೂ, ಜೀವನದ ನಿರ್ಲಕ್ಷ್ಯಕ್ಕೂ ಆಹ್ವಾನವಿತ್ತರೆ, ಈತನ ದಾರಿಯೇ ಬೇರೆ. ಪ್ರೀತಿಎಂಬ ಪಕ್ಷದಿಂದ ಉಚ್ಚಾಟಿತನಾದ ಮೇಲೆ, ಆತನ ಕೈಹಿಡಿದದ್ದು ಪುಸ್ತಕ, ಪೆನ್ನು ಹಾಗು ಕಂಪ್ಯೂಟರ್! ಓದು ಅರಿವುಮೂಡಿಸಿದರೆ, ಪೆನ್ನು ಅನುಭವಕ್ಕೆ ಅಕ್ಷರನೀಡಿತು.
 
"ನನ್ನ ಪ್ರೀತಿಸಲು ನಿನಗೇನು ಯೋಗ್ಯತೆಯಿದೆ" ಎಂದು ಆಕೆ ಇತ್ತಿದ್ದ ಶಾಪದಿಂದ ಕುಗ್ಗಿದೆದೆ ಕಣ್ಣಾವೆಗಳಲ್ಲಿ ಹರಿಸಿದ ನೀರು, ಅದೆಷ್ಟೋ ಪುಸ್ತಕಗಳ ಹಾಳೆಗಳಲ್ಲಿ ಕರಗಿಹೋಗಿತ್ತು, ಮನದ ಬೇಗೇ ಪೆನ್ನಿನ ತುದಿಯಂಚಲ್ಲಿ ತುಳಿದು ತಣ್ಣಗಾಗಿತ್ತು. ಪ್ರೀತಿಯಲಿ ಸೋತ ಸಾಲಗಾರ ನಾನೆಂದು ಬರೆದು ಕೊಂಡಿದ್ದ...
 
ನಾನ೦ದುಕೊಂಡಿರಲಿಲ್ಲ ಗೆಳತಿ
ಕೊಡಬೇಕಾಗಿದೆ ಇಷ್ಟೊ೦ದು ಕಪ್ಪ, ಕಾಣಿಕೆ!
ನಿನ್ನ ಗೆಲುವಿಗೆ!!! ಪ್ರೀತಿಯ ಸೋಲಿಗೆ
ಎಸ್ಟೊಂದು ಪಡೆದೊಯ್ಯಿದೆ?
ಬಂದು, ಬಳಗ, ಬಾ೦ದವ್ಯ...
ಸೋತರಿಸ್ಟು... ಗೆದ್ದರಿನ್ನೇಸ್ಟೆತ್ತೊ ಉಡುಗೊರೆಯಾಗಿ?
 
ಕಂಪ್ಯೂಟರ್ ಮುಂದೆ ಕುಂತವ, ಅಗಲಿರುಳೆನ್ನದೆ ದುಡಿದ. ಹೊಸದಿದ್ದ IT ಯುಗಕ್ಕೆ ತನ್ನಲಿರ ಬೇಕಾದ ಕೌಶಲ್ಯಗಳ ಕಸರತ್ತು ನಡೆಸುತ್ತ ಕಳೆದು ಹೋದ. ಕಾಲನ ಕೃಪೆಯೇ ಹಾಗೆ, ಎಲ್ಲವನೂ ಗುಡಿಸಿ ತೊಳೆದು ಮರೆಸಿಬಿಡುವ ಮೆಜಿಷಿಯನ್ ಅಂದ್ರೆ ಟೈಮ್! ಅದಕೊಂದಿಷ್ಟು ಅವಕಾಶವಿತ್ತರೆ ಸಾಕು, ಹಗುರಾಗಿಸುತ್ತದೆ. ಮಾಸಗಳು ಕಳೆದಂತೆ ಮಾಸಿತು ಅವಳಿತ್ತ ಶಾಪ, ಮರೆವಿನ ಮುಖವಾಡತೊಟ್ಟು ಮುನ್ನಡೆದ ಆತ ಮನದಲ್ಲಿ ಗುನುಗಿದ...
 
ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ.
 
ಮಾಸ್ಟರ್ ಡಿಗ್ರಿ, ಜೊತೆಗೆ ಕೈಸೇರಿದ ವೃತ್ತಿಪರ ಕೋರ್ಸ್ ದಣಿವರಿಯದೆ ದುಡಿದ ಶ್ರಮ ಆತನನ್ನು ಒಂದೊಂದೇ ಮೆಟ್ಟಿಲು ಏರಿಸುತ್ತಾ IT ಯುಗದಲ್ಲಿ, ನೆಲೆಯೂರಿಸಿತು. ಸಂಬಳ ಬಡತನ ನಿವಾರಿಸಿದರೆ, ಹಿಂದಿನ ಸೋಲು ಸ್ಪೂರ್ತಿಯಾಗಿತ್ತು! ಸ್ಪೂರ್ತಿಯ ಸೆಲೆಯಾದ ಆಕೆಗೆ ಆತ ನೀಡಿದ ಗೌರವ!
 
ಅರಿಯದಾಗಿದೆ ಎಲೆ ಹುಡುಗಿ
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
 
ಆತನಿಗೆ ಸುಮಾರು 25 ರ ಹರೆಯ, ನೊಂದ ಮನಸು ನೋವೆಲ್ಲಾ ಕೆದಕಿ ಆಗೊಮ್ಮೆ ಈಗೊಮ್ಮೆ ಕಾಡುತ್ತಲೇ ಇತ್ತು. ಪ್ರೀತಿಯ ಪಚೀತಿ ಬೇಡವೆಂದು ನಿರ್ಧರಿಸಿ ಆತ ಆಯ್ಕೆ ಮಾಡಿದ್ದೂ ಮದುವೆ! ಹಿರಿಯರೊಪ್ಪಿದ ಕನ್ಯೆನೋಡಲು ಹೊರಟವನು ಕಂಡ ಕನ್ಯೆಯೊಡನೆ, ತಾ ಕಟ್ಟಿದ್ದ ಪ್ರೀತಿಯ ಕನಸಿನ ಮಹಲು, ಅದು ನೆಲಕಚ್ಚಿ ನೆಮ್ಮದಿಯನ್ನು ಕಸಿದುಕೊಂಡಿದ್ದ ಕಹಿನೆನಪು ಎಲ್ಲ ತಿಳಿಸಿ, ಒಪ್ಪಿದರೆ ಕಣ್ಣಕಾಯುವ ರೆಪ್ಪೆಯಹಾಗಿ ಬದುಕುವುದಾಗಿ ಬರವಸೆಯಿತ್ತ. ಕನ್ಯೆ, ಸುಂದರ ಸ್ಪೂರ್ತಿಯ ಸೆಲೆ! ಕುಂದಿದ್ದ ಕನಸ ನೀರೆರೆದು ಬೆಳೆಸಿ, ಆತನ ಅರ್ಥ ಮಾಡಿಕೊಂಡಳು, ಅರ್ಧಾಂಗಿಯಾದಳು. ಈತನೋ ಬೆಂದಿದ್ದ ಭಾವಜೀವಿ, ಆಕೆಯ ಕೈಹಿಡಿದು ಎಲ್ಲ ಬೆರಗಾಗುವಂತೆ ಬಾಳಿದ. ಬಾಳ ಗೆಳತಿಯ ಬಾಂಧವ್ಯದ ಬಣ್ಣನೆ ಆತನಿಗೋ ಬಣ್ಣಿಸಲಾಗದ್ದು, ಆದರೂ ಅದಕ್ಕೂ ಅಷ್ಟಿಷ್ಟು ಅಕ್ಷರ ರೂಪ.
 
ಗೆಳತಿ!!!
ಅದಾವ ಕ್ಷಣದಲಿ ನೀ ಸೃಷ್ಟಿಕರ್ತೆಯಾದೆ?
ಅದಾವ ಕ್ಷಣದಲಿ ನನ ಮನಸಿಗೆರಡು ರೆಕ್ಕೆ ಕೊಟ್ಟೆ?
ಹಾರುತ್ತಿದೆ ಮನಸಿಂದು ಸ್ವಚ್ಚಂದವಾಗಿ...
ನಿನ್ನಿಂದಲೇ...
 
ನಿಂತನೀರಾಗಿ ಕೊಳೆತು ನಾರುವ ಬದಲು, ಹರಿದು ಹಗುರಾಗುವುದು ಒಳಿತು. ಬದುಕಿನ ಅದೆಷ್ಟೋ ತಿರುವುಗಳು ನಮ್ಮನ್ನು ಕನ್ಫ್ಯೂಸ್ ಮಾಡುತ್ತವೆ, ಕಣ್ಣೀರು ತರಿಸುತ್ತವೆ. ಆ ತಿರುವಿನಲ್ಲಿ ಕಣ್ಣೀರುತುಂಬಿ ಮೊಬ್ಬಾದ ದೃಷ್ಟಿಯಲ್ಲಿ ಎತ್ತಲೋ ಸಾಗುವ ಬದಲು. ಕೊಂಚ ಸಮಯವಿತ್ತು. ಕಣ್ಣೀರು ಕರಗಿ, ದೃಷ್ಟಿ ತಿಳಿಯಾದಮೇಲೆ ದೃಢನಿರ್ಧಾರವೊಂದ ತಗೆದುಕೊಂಡು ಬದುಕು ಕಟ್ಟಿಕೊಳ್ಳುವುದು ಜಾಣ್ಮೆ. ಕವಿದ ಕತ್ತಲಾಚೆ ಬೆಳಕೊಂದು ಕಾದಿರುತ್ತದೆ, ಸ್ವಲ್ಪ ಕಾಯಿರಿ, ಗೆಲುವು ನಿಮ್ಮದೇ...
 
(ಕೊನೆಯದಾಗಿ ಓದುಗಮನಸಿಗೆ, ಇದು ಕಟ್ಟಿದ ಕಥೆಯಲ್ಲ ಹಾಗಾಗಿ ಎಲ್ಲೂ ನಿಮ್ಮ ಕಲ್ಪನೆಗೆ ಅವಕಾಶವಿಡದೆ, ಕಂಡದೆಲ್ಲ ಕೊರೆಯದೆ ಕೊಂಚವೇ ಹೇಳಿ ಮುಗಿಸಿದ್ದೇನೆ. ಮನ್ನಿಸಿ.)

Tuesday, March 19, 2024

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ. ಇರಲಿ ಅದಕ್ಕೊಂದು ನೀತಿ. ಭಾಗ - 1 (ನೈಜ ಘಟನೆಯಾದಾರಿತ)

ಅದೊಂದು ಭವ್ಯವಾದ ಮಂಗಳ ಮಂಟಪ, ನಡೆದಿತ್ತು ಅಲ್ಲೊಂದು ಸಿರಿವಂತರ ಸಡಗರದ ಮದುವೆ! ಅವರ ಅನುಕೂಲಕ್ಕೆ, ಅಂತಸ್ತಿಗೆ ತಕ್ಕನಾದ ಉಡುಗೆ ತೊಡುಗೆ, ಅಲಂಕಾರ ಎಲ್ಲವು ಅಚ್ಚುಕಟ್ಟು, ಜೊತೆಜೊತೆಗೆ ಶಾಸ್ತ್ರೋಕ್ತವಾದ ಮದುವೆ ಕಾರ್ಯಗಳು. ನೆರೆದ ಬಂಧುಬಳಗಕ್ಕೆ ಭಕ್ಶ್ಯ ಭೋಜನಗಳ ಜೊತೆಗೆ ಹೊಸನೋಟ, ಹೊಸತನ. ಈ ಮದುವೆ ಸಮಾರಂಭಗಳೆ ಹಾಗೆ ಪರಿಚಯಕ್ಕೆ, ಮಾತುಕತೆಗೆ, ಮುಖತಃ ಭೇಟಿಗೆ ಒಳ್ಳೆಯ ವೇದಿಕೆ! ಈ ವೇದಿಕೆಯಲ್ಲಿ ನಡೆದ ಅದೆಷ್ಟೋ ಪರಿಚಯಗಳಂತೇ, ಅಲ್ಲಿ ನಡೆದಿತ್ತು ಮತ್ತೊಂದು ಪರಿಚಯ, ಅದು, ವಯೋಸಹಜ ಕಣ್ಣ್ ಕಣ್ಣ ಸೆಳೆತ! ಆಕೆ ಸಿರಿವಂತಕೆಯೇ ಮೈವೆತ್ತಿದ್ದ ಸುಂದರಿ, ಆತ ಬಡವ! ಆದರೆ ಅವನಿಗದು ಅರಿವಿಲ್ಲದ ಚಿಗುರು, Love at first sight.
ಆತ ಆಗಷ್ಟೇ ಪದವಿ ಮುಗಿಸಿ, ಬೆಂಗಳೂರಿನಲ್ಲೊಂದು ಕೆಲಸಗಿಟ್ಟಿಸಿದ್ದ, ಆಕೆ ಪದವಿ ವಿದ್ಯಾರ್ಥಿ. ಪ್ರೀತಿಗಾವ ಪರಿಬಾಷೆ, ಯಾವ ಎಲ್ಲೇ, ಯಾವ ಅಡೆತಡೆ ಇಲ್ಲದೆ ಪ್ರೀತಿ ಸಂಭವಿಸುತ್ತದೆ. ಇಬ್ಬರ ನೋಟ ನಗುವಾಗಿ, ನಯವಾಗಿ ಮದುವೆಯ ಶಾಸ್ತ್ರ ಸಂಪ್ರದಾಯಗಳ ನಡುವೆ ಅಲ್ಪ-ಸ್ವಲ್ಪ ಮಾತುಕತೆಯು ಆಯಿತು, ಆದರೆ ಇಬ್ಬರಿಗೂ  ಬೇರೆ ಪರಿಚಯವಿಲ್ಲ ಎಲ್ಲ ಕೇಳಿ ತಿಳಿಯುವ ಸಮಯವೂ ಅಲ್ಲ, ಕೇಳುವ ದೈರ್ಯವೂ ಇಲ್ಲ ಹೀಗೆ ಮದುವೆ ಮುಗಿದು ಕನಸಗಳು ಹುಟ್ಟಿದವು. ಆದರೆ ಇನ್ನೊಂದೆರಡುದಿನ  ವರನ ಗೃಹದಲ್ಲೊಂದು ಆರತಕ್ಷತೆ (ಬೀಗರ ಔತಣ ಎಂದುಕೊಳ್ಳಿ) ಮೊಳಕೆಯೊಡೆದ ಕನಸಿಗೊಂದು ವೇದಿಕೆ, ನೋಡಲವಕಾಶ ಕಲ್ಪಿಸುತ್ತದೆ, ಎನ್ನುವುದು ಆತನ ಊಹೆ.
 
ಊಹಿಸಿದಂತೆ ಆಕೆ ಬೀಗರ ಔತಣಕ್ಕೆ ಬಂದಿಳಿದಳು. ಅದು ನೋಟ ನಗುವಿಗೆ ವೇದಿಕೆಯಾಯಿತೇ ಹೊರತು ವಿಷಯ ವಿನಿಮಯಕ್ಕಲ್ಲ. ಅದನ್ನು ಭಯವೆನ್ನಿ, ಫಿಯರ್ ಆಫ್ ಫೇಲ್ಯೂರ್ ಅನ್ನಿ ಹಾಗೆಯೆ ಏನೂ ಹೇಳದೆ ಕೆಲವೊಂದು ನೋಟ-ನಗುವಿನಲ್ಲಿ ಬೀಗರ ಔತಣ ಮುಗಿದುಹೋಯಿತು, ಆತನ ಬಡತನದ ಜೊತೆಗಿಷ್ಟು ಭಯ ಮತ್ತು ಆಕೆಯ ಸಿರಿತನದ ಜೊತೆಗಿಷ್ಟು ದೈರ್ಯವಂತೂ ಕಟ್ಟಿಟ್ಟ ಭುತ್ತಿ ಬಂದ ಕಾರ್ಯಕ್ರಮ ಮುಗಿಸಿ ಹೊರಟು ನಿಂತ ಆಕೆ ಎಲ್ಲರ ಮುಂದೆ ಆತನಿಗೊಂದು ಬೈ ಹೇಳಿ ಕಾರತ್ತಿ ಹೊರಟು ಹೋದಳು.
 
ಅದಿನ್ನೂ ಲ್ಯಾಂಡ್ಲೈನ್ ಯುಗ, ಮೊಬೈಲ್ಗಳು ಎಲ್ಲರ ಕೈತಲುಪಿರಲಿಲ್ಲ. ಸೊ ಬೇಕಿದ್ದವರು ನಂಬರ್ ಪಡೆಯುದುವು ಕಾಲ್ ಮಾಡಿ ಮಾತನಾಡುವುದು ಸಂಕಷ್ಟವೇ ಸರಿ. ಹೀಗಿರುವಾಗ ಹೆಸರು ಕೇಳದೆ, ಯಾರೆಂದು ತಿಳಿಯದೆ ಆಕೆ ಮತ್ತು ಆತನ ನಡುವೆ ಒಂದು ಬ್ರೇಕ್ ಬಿದ್ದಿತ್ತು. ಜೊತೆಗೆ ಹೆಸರು ತಿಳಿಸದ ಆಕೆ, ಆತನಿಗೆ ಅನಾಮಿಕೆಯಾಗಿದ್ದಳು!
 
ಇದ್ದದ್ದು ದೂರವೇ, ಆದರೇನು ಕನಸುಗಳಿಗೆ ಕೊರತೆ ಇಲ್ಲ, ಆತ ಮನಸೆನೆಂಬ ದೇಗುಲದಲ್ಲಿ, ‘ಅನಾಮಿಕೆ’ಯಂಬ ದೇವತೆಯನಿರಿಸಿ, ನೆನಪಿನ ನೈವೇದ್ಯೆ ನೀಡಿ ನಡೆಸಿದ್ದ ಪ್ರೀತಿಯ ಪೂಜೆ, ಮತ್ತು ಈ ಪೂಜಾ ಕೈಂಕರ್ಯ ಸರಿ ಸುಮಾರು ಎರಡು ವರ್ಷವಿರುವಾಗ. ಪ್ರೀತಿಯ ಪರೀಕ್ಷೆಗೆ ಬೇಕಾದ ಸಕಲ ಸಿದ್ಧತೆ ಮಾಡಿ ಸಿಕ್ಕ ಸಣ್ಣ ಪುಟ್ಟ ಸುಳಿವುಗಳನ್ನ ಕ್ರೋಡೀಕರಿಸಿ ಕೊನೆಗೂ ಯಲ್ಲೋ ಪೇಜೆಸ್ ಸಹಾಯದಿಂದ ಆಕೆಯ ವಿಳಾಸದಕ್ಕಿಸಿಕೊಂಡು, ಆತ ಮೆಟ್ರೋ ಸಿಟಿಯಿಂದ ಹೊರಟ ಪಯಣ ಸ್ನೇಹಿತರ ಸಹಾಯದೊಂದಿಗೆ ಬಂದು ನಿಂತದ್ದು ಆಕೆಯ ಮನೆಯ ಮುಂದೆ. ಹಿಂದೆ ನಡೆದಿದ್ದ ಮದುವೆಯ ಪರಿಚಯದಿಂದ ಅತಿಥಿ ಸತ್ಕಾರಕ್ಕೇನು ಕೊರತೆತರಲಿಲ್ಲ, ಮನೆ ಸಿಕ್ಕ ಖುಷಿಯೊಂದಿಗೆ, ಡೈನಿಂಗ್ ಟೇಬಲ್ ನಲ್ಲಿ ಟೀ ಸವಿಯುತ್ತ ಆತ ಕಣ್ಣಾಡಿಸಿದ್ದು ಅಲ್ಲಿದ್ದ ಪುಸ್ತಕಗಳ ಮೇಲೆ ಆಗ ಪುಸ್ತಕಗಳು ಹೇಳಿದವು ಆ ಅನಾಮಿಕೆಯ ಹೆಸರು!!! ಅಂತೂ ಟೀ ಸವಿದು ಮುಗಿಯುವ ವೇಳೆಗೆ ಆಕೆಯ ದರ್ಶನವು ಹಾಗಿ ಆತ ಅಲ್ಲಿಂದ ಹೊರಟ. ಎರಡು ವರ್ಷಗಳ ನಿರಂತರ ಪೂಜೆಗೆ ದೊರೆತದ್ದು ದೇವಿ ದರ್ಶನ ಮತ್ತು ಆಕೆಯ ಹೆಸರೇ ವರಪ್ರಸಾದ!!! ಅಂತೂ ಕಡಲಾಳದಿಂದ ಮುತ್ತೆತ್ತಿದ ಸಂಭ್ರಮ, ಎರಡು ವರ್ಷಗಳ ಕಾಯುವಿಕೆಗೆಗೊಂದು ಬ್ರೇಕ್!
 
ಇದೆ ಖುಷಿಯಲ್ಲಿ ಆತನೆದೆಯಲ್ಲಿ ನಡೆದಿತ್ತು ಪ್ರೀತಿ ಪ್ರಸ್ತಾವನೆಯ ತಯಾರಿ, ಅಂತೂ ಇಂತೂ ಇದ್ದ ದೈರ್ಯವನೆಲ್ಲವ ಸೇರಿಸಿ ಮೆಟ್ರೋ ಸಿಟಿಯ ಎಸ್ ಟಿ ಡಿ ಬೂತ್ಹೊಂದರ ಬಾಗಿಲು ಜಡಿದು ಫೋನಾಯಿಸಿದಾಗ ಅತ್ತ ಅದೇ ಮಧುರ ಧ್ವನಿ! ಹಲೋ ಎಂದು ಶುರುವಿಟ್ಟು ಪುಟ್ಟ ಪರಿಚಯದೊಂಗಿದೆ ನಡೆದದ್ದು ಪ್ರೀತಿಯ ಪ್ರಸ್ತಾವನೆ. ಅನಾಮಿಕೆಯಂಬ ದೇವತೆಗೆ ಅರ್ಪಿಸಿದ್ದ ಪೂಜೆ, ಕನಸುಗಳ ನೈವೇದ್ಯ ಫಲಕೊಡುವುದೆಂಬುದು ಭಕ್ತನ ಭಾವ! ಪೂಜೆಯ ಅರಿವಿಲ್ಲದ ದೇವಿ ತುಂಬ ಪ್ರಾಕ್ಟಿಕಲ್! ನಗರದ ವಾತಾವರಣ, ಸಿರಿವಂತಿಕೆ, ಬದುಕಿನ ಅರಿವಿದ್ದ ವಿದ್ಯಾರ್ಥಿ. ಆಕೆ ಆಗಲೇ ಎಣಿಸಿಯಾಗಿತ್ತು ಹಣ ಅಂತಸ್ತಿನ ಲೆಕ್ಕಾಚಾರ. ಸೊ, ನನ್ನ ಪ್ರೀತಿಸಲು ನಿನಗೇನೂ ಯೋಗ್ಯತೆಯಿದೆ ಎಂದು ಆಕೆ ಇತ್ತಿದ್ದಳು ಶಾಪ.
 
ನಗುವಿಗೆ ನಾಲಿಗೆಯಿಲ್ಲ, ನಗು ಹಲವು ಸನ್ನಿವೇಶಗಳ ಭಾವ, ಅದನರಿಯದ ಆತ ಅದಕೆಸರಿಟ್ಟಿದ್ದು ಪ್ರೀತಿಯೆಂದು. ಈ ಹುಡುಗರೇ ಹಾಗೆ, ಎಡವುವುದು ಜಾಸ್ತಿ, ನೋಟ, ನಗು, ಆಕರ್ಷಣೆಗೆ ಅವರಿಡುವ ಹೆಸರೇ ಪ್ರೀತಿ. ಆದರೇನು, ಎರಡು ವರ್ಷಗಳ ಅಂತರ, ಪ್ರೀತಿಯ ನಿರಂತರ ನಿತ್ಯ ನೈವೇದ್ಯ, ಕನಸುಗಳು ಕಟ್ಟಿ ಕೊಟ್ಟಿದ್ದ ಭುತ್ತಿ ದೊಡ್ಡದೇ ಮತ್ತು ಲವ್ ಫೇಲ್ಯೂರ್ ನ ನೋವು ಕೂಡ.
 
ಪ್ರೀತಿಯ ನಿರಾಕರಣೆಯ ನೋವು ಕಡಿಮೆಯೇನೂ? ಆತ ಸೊರಗಿ, ಕೊರಗಿ ಒಂಟಿಯಾಗಿ, ಬಾಲ್ಕನಿಯಲ್ಲಿ, ಟೆರೇಸಿನಲ್ಲಿ, ಬೆಳದಿಂಗಳ ರಾತ್ರಿಯಲ್ಲಿ, ಅಮಾವಾಸೆಯ ಕತ್ತಲಲ್ಲಿ ನಿರಾಕರಣೆಯ ನೋವು ಕಣ್ಣೀರಾಗಿ ಹರಿಯತೊಡಗಿತು, ಅತ್ತು ನಿತ್ರಾಣಗೊಂಡು ಆತ ಚೀರಿದ್ದು "ಪ್ರೀತಿಯಲಿ ಸಾಗರ ನಾನು..... ಅದರಲ್ಲಿ ಈಜಲಾರದೆ ಹೋದ ಮೀನು ನೀನು...... ಅನಾಮಿಕೆ!"
 
ತಪ್ಪಿನ ಅರಿವು, ಪಶ್ಚಾತಾಪ, ಕ್ಷಮೆಯಾಚನೆ ನಮ್ಮನ್ನು ಎಷ್ಟೋ ನಿರಾಳವಾಗಿಸುತ್ತವೆ, ಅಂತೆಯೇ ಆತ ನುಡಿದ
 
ಕ್ಷಮಿಸು....!!!
ಮನದ ಮಾತುಗಳನ್ನ,
ಬಚ್ಚಿಡಲಾಗದೆ ಬಿಚ್ಚಿಟ್ಟಿದ್ದಕ್ಕೆ
ಪ್ರಶಾಂತವಾದ ನಿನ್ನ,
ಮನಸಿನಲಿ ಅಲೆ ಹೆಬ್ಬಿಸಿದ್ದಕ್ಕೆ
ಕುಡಿಗಣ್ಣ ನೋಟವನು,
ತಪ್ಪಾಗಿ ಅರ್ಥೈಸಿದಕ್ಕೆ...
ಕ್ಷಮಿಸು  ನನ್ನ...!!!
 
ಆತನೆದೆಯಲ್ಲಿ ನಿರಾಕರಣೆ ದ್ವೇಶಹುಟ್ಟಿಸುವ ಬದಲು ಬದುಕು ನೋಡುವ ದೃಷ್ಟಿ ಬದಲಿಸಿತು, ಯಾವ ಬಡತನಕ್ಕೆ ಅನಾಮಿಕೆ ಎಂಬ ದೇವಿಯ ಶಾಪಬಿತ್ತೋ ಅದನ್ನು ತೊಲಗಿಸಲು ತನ್ನ ಕೆಲಸದಜೊತೆ ಓದಲು ಸುರುವಿಟ್ಟ, ಸಾಹಿತ್ಯ, ಪತ್ರಿಕೆ, ವೃತ್ತಿಪರ ಕೋರ್ಸಗಳು, ಮಾಸ್ಟರ್ ಡಿಗ್ರಿ ಹೀಗೆ ಓದುತ್ತ, ದುಡಿಯುತ್ತ ಸಾಗಿದ, ಆತನ ಓದು ಅರಿವು ಮೂಡಿಸಿತು, ಬರೆಸಿತು, ಬದುಕ ಬದಲಿಸಿತು. ಅರಿತವನ ಎದೆಯಲ್ಲಿ, ಅರಿವಿನ ಅಲೆಯೊಂದು ಬಂದು ಭ್ರಮೆಯನ್ನು ಬಡಿದೋಡಿಸಿತು.
 
ಭ್ರಮೆ
ಅಂದೊಮ್ಮೆ ಅಂದಿದ್ದೆ
ನೀನಿರದೆ ನಾನಿಲ್ಲ
ಒಲವಿಲ್ಲ, ಛಲವಿಲ್ಲ, ಬದುಕಿಲ್ಲ...
ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ
ಅರಿತಾಯ್ತು!!! ನೀನಿರದೆ ನಾನುಂಟು
ಒಲವುಂಟು, ಚಲವುಂಟು, ಬದುಕುಂಟು...

ಆ ತಿರಸ್ಕಾರ, ಆತನೆದೆಯಲಿ ಮೂಡಿಸಿದ ನೋವು-ನಲಿವುಗಳೇನು.... ಮುಂದುವರಿಯುತ್ತದೆ.

ಬದುಕು ಘಟನೆಗಳಜೊತೆ ಪಾಠ ಕಲಿಸುತ್ತ ಹೋಗುತ್ತದೆ, ನಡೆದ ತಪ್ಪುಗಳು, ಅನುಭವಗಳಾಗುತ್ತವೆ, ಮತ್ತು ಮತ್ತದೇ ತಪ್ಪು ಮಾಡದಂತೆ ಎಚ್ಚರಿಸುತ್ತಾ ದಾರಿದೀಪವಾಗಿ ಬದಕು ಬೆಳಗಿಸುತ್ತದೆ. ಹೀಗೆ ಎಲ್ಲರಲ್ಲೂ ಬದುಕಿನ ಪಾಠಕಲಿಯುವ ನಾವು, ಪ್ರೀತಿಯೆಂಬ ಘಟನೆಯೊಂದು ವಿರುದ್ಧ ದಿಕ್ಕಿನಲ್ಲಿ ಸಾಗಿದಾಗ ಆತ/ಆಕೆಯ ಆಯ್ಕೆ, ಅಭಿಪ್ರಾಯ ಮತ್ತು ಗುರಿಗಳಿಗೆ ಗೌರವವಿತ್ತು, ನಮ್ಮ ಬದುಕ ತಿದ್ದಿಕೊಳ್ಳುವುದು ಅತ್ಯಗತ್ಯ ಅಲ್ಲವೇ? ಈ ಅರಿವಿನ ಅಂದರ, ನಮ್ಮ ಸಮಯ, ಬುದ್ದಿ ಮತ್ತು ಗೌರವಕ್ಕೆ ಧಕ್ಕೆ ಬರದಂತೆ ಕಾದು ಸುಂದರ ಬದುಕೊಂದು ಸುಡುಗಾಡಗದಂತೆ ನೋಡಿಕೊಳ್ಳುತ್ತದೆ. ಯೋಚಿಸಿ!

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ...ಇರಲಿ ಅದಕ್ಕೊಂದು ನೀತಿ… ಕಳೆದುದರ ಬಗ್ಗೆ ಚಿಂತಿಸುತ್ತ ಯಾಕೆ ಮಾಡ್ಕೋತೀರಿ ಪಚೀತಿ.

Friday, March 15, 2024

ಮಸಾಜಲ್ಲೂ ಅರಳಿದ ಮಾನವತೆ

 ಅದು ಕಡಲ ತೀರಗಳಿಂದ ಕಂಗೊಳಿಸುವ ರಾಜ್ಯ, ಅಲ್ಲಿನ ಊಟಕ್ಕೆ, ನೋಟಕ್ಕೆ ಶರಾಬಿಗೆ ಸೋಲದವರೇ ಇಲ್ಲ! ಪಾಶ್ಚ್ಯತ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಈ ನೆಲದಲ್ಲಿ ಕಣ್ತೆರೆದಷ್ಟು ಕಾಣುವುದು ಕಡಲು ಮತ್ತು ಕನ್ಯೆಯರು. ಇಲ್ಲಿ ಎಲ್ಲರ ದರವೂ ಕಡಿಮೆ, ಮತ್ತೆಲ್ಲ ಕಾನೂನು ಬದ್ದ, ಇದು ಗೋವಾ! ದಕ್ಷಿಣದಿಂದ, ಉತ್ತರದಿಂದ, ಪಾಶ್ಚಾತ್ಯದಿಂದ ಬರುವ ಅದೆಷ್ಟೋ ಪ್ರವಾಸಿಗರಿಗೆ ಇದು ಸ್ವರ್ಗ.
 
ಫೆಬ್ರವರಿ ತಿಂಗಳ ಮಧ್ಯದಲ್ಲಿ ಗೋವಾತಲುಪಲು ಸಿದ್ಧತೆ ನಡೆಸಿದ್ದ ಆ ಪ್ರವಾಸಿಗರ ಪ್ರಯಾಣ ಮೈಸೂರಿಂದ ಮೊದಲುಗೊಂಡು, ಮಂಗಳೂರಿನ ಪಬ್ಬಾಸ್ ಐಸ್ಕ್ರೀಮ್ ಸವಿದು, ಮರವಂತೆಯಲ್ಲಿ ಮೈಮರೆತು, ಮುರುಡೇಶ್ವರನ ಮಡಿಲಲ್ಲಿ ಮಿಂದು, ಗೋಕರ್ಣದ ಆತ್ಮಲಿಂಗವ ಅಪ್ಪಿ, ಕಾರವಾರದ ಕಡಲತೀರ ದಾಟಿ ಗೋವಾ ತಲುಪಿತ್ತು. ಅದು ವಾರದ ಮದ್ಯದ ದಿನ, ಎಲ್ಲರು ತಂತಮ್ಮ ಲ್ಯಾಪ್ಟಾಪ್ಗೆ ಅಂಟಿಕೊಂಡು ಕೆಲಸ ಕರಗಿಸಿ ಸಮಯಸಿಕ್ಕಾಗ ಬೀಚು! ಬೀರು!
 
ಪ್ರಯಾಣದ ದಣಿವರಿಸಲು, ಮಸಾಜಿನ ಮೊರೆಹೋಗಬೇಕೆಂದಿದ್ದ ಸದಸ್ಯನೊಬ್ಬ ಶನಿವಾರ ಬೆಳಿಗ್ಗೆ ಥಾಯ್ ಸ್ಪಾ ಹೊಕ್ಕು ಮಸಾಜಿಗೆ ಮೈಹೊಡ್ಡಿ ಮಲಗಿದ್ದ, ಮಸಾಜು ಮಾಡಲು ಬಂದಾಕೆ ಇಪ್ಪತ್ತರ ಹರೆಯದ ಅಂದಗಾತಿ, ಆಕೆಗೆ ಹಲವು ಗ್ರಾಹಕರಂತೆ ಈತನು ಒಬ್ಬ. ಸ್ಪಾನ ಮಂದಬೆಳಕು, ಮುಖದಲ್ಲಿದ್ದ ಮಾಸ್ಕ ಆಕೆಯ ಮುಖವನ್ನು ಕಾಣಲು ಬಿಡಲಿಲ್ಲ, ಕಣ್ಗಳ ಕಾಂತಿಮಾತ್ರ ಆಕೆಯ ಸೌಂದರ್ಯ ಸಾರುತ್ತಿದ್ದವು.
 
ಆಕೆ ಎಣ್ಣೆ ಅದ್ದಿದ ಕೈಗಳಿಂದ ಮಸಾಜು ಸುರುವಿಟ್ಟಿದ್ದಳು. ಅಲ್ಲಿದ್ದ ಮೌನ, ಮಂದಬೆಳಕು, ಮಸಾಜು ಆತನಿಗಿನ್ನು ನಿದ್ದೆ ತಂದಿರಲಿಲ್ಲ. ಆಕೆಯನ್ನು ಮಾತಿಗೆಳೆಯಲು, ಆತನೇ ಸುರುವಿಟ್ಟು ನಿನ್ನ ಹೆಸರೇನು ಎಂದು ಪಿಸುಗುಟ್ಟಿದ. ಅಲ್ಲಿದ್ದ ಮೌನಕ್ಕೆ, ಆ ಪಿಸುಮಾತು ಪ್ರತಿಧ್ವನಿಸಿ, ಆಕೆಯಿಂದ ಬಂದ ಉತ್ತರ ಜಾನು! (ಇಬ್ಬರ ಹೆಸರು ಬದಲಿಸಿದೆ, ಇಬ್ಬರ ವೃತ್ತಿ, ವ್ಯಕ್ತಿತ್ವ ಮತ್ತು ಗೌರವಕ್ಕೆ ಯಾವುದೇ ಧಕ್ಕೆಬರದಂತೆ ಹೆಣೆದ ಕಥೆಯಿದು, ಇಲ್ಲಿಂದ ನಮ್ಮ ಕಥಾ ನಾಯಕನನ್ನು ಜಾನ್ ಎಂದು ಊಹಿಸಿಕೊಳ್ಳಿ).
ಜಾನ್: ನಿಮ್ಮೂರು?
ಜಾನು: ಉತ್ತರ ನೀಡಿದಳು (ಆಕೆ ಬಹುದೂರದಿಂದ ಬಂದು ಗೋವದಲ್ಲಿ ವೃತ್ತಿಗಾಗಿ ನೆಲೆಸಿದ್ದರು)
ಜಾನ್: ಈ ಕೆಲಸದ ತರಬೇತಿ?
ಜಾನು: ಮುಂಬೈಯಲ್ಲಿ ತರಬೇತಿಯಾಗಿದೆ
ಜಾನ್: ಅಷ್ಟು ದೂರದಿಂದ ಇಲ್ಲಿ ಬಂದು ಕೆಲಸ ಮಾಡುವ ಕಾರಣ (ಆಕೆಗಿದು, ಯಾವ ಗ್ರಾಹಕರು ಕೇಳಿರದ ಪ್ರಶ್ನೆ)
ಜಾನು: ವಿಚಲಿತಳಾಗದೆ, ಆಕೆ ಉತ್ತರ ವಿತ್ತಳು
 
ಜಾನ್ ಕೇಳುತ್ತಾ ಹೋದ, ಆತನ ಆತ್ಮೀಯತೆಯ ಮಾತಿಗೆ, ಆಕೆ ಮಾತಾದಳು, ಮಗುವಾದಳು, ತನ್ನೆಲ್ಲ ಕಥೆ ಹೇಳಿ ಕಣ್ಣೀರಾದಳು.
 
ಜಾನು ಹುಟ್ಟಿಬೆಳೆದದ್ದು ಉತ್ತರದ ದೂರದ ರಾಜ್ಯದಲ್ಲಿ, ಆಕೆಯದು ಮಧ್ಯಮವರ್ಗದ ಕುಟುಂಬ, ತಂದೆ ಅಕಾಲಿಕ ಮರಣಹೊಂದಿದ್ದರೆ, ತಾಯಿ ಜಾನುವಿನ ತಮ್ಮನ ಜವಾಬ್ದಾರಿಹೊತ್ತು ಅಕ್ಷರ ಕಲಿಸುತ್ತಿದ್ದಾರೆ. ತಂದೆಯ ಮರಣಾನಂತರ ಅನಾಯಾಸವಾಗಿ ಮನೆಯ ಜವಾಬ್ದಾರಿ ಬಿದ್ದದ್ದು ಮಗಳ ಹೆಗಲಮೇಲೆ, ಜಾನು ಪದವೀಧರೆ, ಹಳ್ಳಿಯ ಭಾಗದಿಂದ ಬಂದವಳು, ಅಷ್ಟೇನು ಕಂಪ್ಯೂಟರ್, ಇಂಗ್ಲಿಷ್ ಜ್ಞಾನವಿಲ್ಲ. ಸಂಬಂಧಿಕರ ಸಲಹೆಯಂತೆ, ಆಕೆಯ ಕೈಹಿಡಿದದ್ದು ಮಸಾಜ್ ಥೆರಪಿಸ್ಟ್ ಕೋರ್ಸ್ ಮತ್ತದರಿಂದ ದೊರೆತ ಕೆಲಸ. ಈಕೆಯ ಸಂಬಳದಿಂದಲೇ ತಾಯಿಯ ಜೀವನ, ತಮ್ಮನ ವಿದ್ಯಾಭ್ಯಾಸ ಸಾಗಬೇಕು.
ಜಾನ್: ಕೆಲಸದ ಒತ್ತಡ?
ಜಾನು: ವಾರಾಂತ್ಯ ಬಿಟ್ಟರೆ, ಬೇರೆ ದಿನ ಅಷ್ಟೇನು ಒತ್ತಡವಿಲ್ಲ
ಜಾನ್: ಇಲ್ಲಿ ಏನಾದರು ಅತಾಚುರ್ಯ ನಡೆದರೆ? ಗ್ರಾಹಕರು ತಪ್ಪಾಗಿ ವರ್ತಿಸಿದರೆ
ಜಾನು: ಹಾಗೇನು ಇಲ್ಲ, ಇಲ್ಲಿರುವ ಬೌನ್ಸರ್ಸ್ ಯಾವುದೇ ಅತಾಚುರ್ಯಕ್ಕೆ ಅವಕಾಶ ಕೊಡುವುದಿಲ್ಲ, ಗ್ರಾಹಕರು ತಪ್ಪಾಗಿ ವರ್ತಿಸಿ ನಾವು ಸಹಾಯಕ್ಕಾಗಿ ಕೂಗಿದರೆ, ಕ್ಷಣಾರ್ಧದಲ್ಲಿ, ಗ್ರಾಹಕ ಜೈಲುಪಾಲಾಗಿರುತ್ತಾನೆ
ಜಾನ್: ಸ್ಪಾನ ಮಾಲೀಕರು ನಿಮ್ಮನ್ನು ನೋಡಿಕೊಳ್ಳುವು ಬಗೆ
ಜಾನು: ಮಾಲೀಕರು, ನಮಗೆ ಬೇಕಾದ ಎಲ್ಲ ಸೇಫ್ಟಿ ಮೆಸರ್ಸ್ ಇಟ್ಟಿದ್ದಾರೆ, ಇಲ್ಲೇನು ತೊಂದರೆ ಇಲ್ಲ.
ಮಸಾಜಿನೊಂದಿಗೆ ಇಬ್ಬರ ಮಾತು ಮುಗಿದಿತ್ತು
 
ಸ್ಪಾಯಿಂದ ಹೊರಬಿದ್ದ ಜಾನ್ ಗೆ, ಅದೆಷ್ಟೋಬಾರಿ ಅದ್ಭುತವಾಗಿ ಕಂಡಿದ್ದ ಗೋವಾ, ಅಲ್ಲಿನ ಬೀಚು, ಬಿಯರು, ಯಾವುದು ಅಂದವೆನಿಸಲಿಲ್ಲ. ಅಲ್ಲಿನ ರೆಸ್ಟೋರೆಂಟ್ಗಳಲ್ಲಿ, ಮಾಲ್ಗಳಲ್ಲಿ, ಪಬ್ಗಳಲ್ಲಿ ದುಡಿವ ಹೆಣ್ಮಕ್ಕಳೆಲ್ಲ ಜಾನುವಿನಂತೆಯೇ ಕಂಡರೂ, ಅವಳಂತೆಯೇ! ಇವರೆಲ್ಲರಿಂದೆ ಯಾವ ಕಥೆಗಳಿವೆ, ಎಲ್ಲ ಮರೆತು, ಹೇಗೆ ನಕ್ಕಾರೆಂಬ ಪ್ರಶ್ನೆಗಳಲ್ಲಿ, ಜಾನುವಿನ ಕಥೆಯಲ್ಲಿ, ಅವಳ ಕಣ್ಣೀರಲ್ಲಿ ಗೋವಾದ ಕಲರ್ಸ್ ಕರಗಿಹೋಗಿದ್ದವು. ಇದೆ ಗುಂಗಲ್ಲಿ, ಸಂಜೆ ಒಂದೆರಡು ಬಿಯರ್ ಇಳಿಸಿ, ನಿದ್ದೆಗೆ ಜಾರಿದ. ಮರುದಿನ ಬೆಳಿಗ್ಗೆ ಎದ್ದವನೇ ಏನೋ ಸಂಚಲನವಾದಂತೆ ರೆಡಿಯಾದ ಜಾನ್, ತಿಂಡಿತಿಂದು ಮರಳಿದ್ದು ಅದೇ ಸ್ಪಾಗೆ, ಜಾನುವಿನ ದರ್ಶನಕ್ಕಾಗಿ. ಸ್ಪಾದ ಮ್ಯಾನೇಜರ್ ಜೊತೆ ಮಾತನಾಡಿ ಮಸಾಜಿನ ಫೀ ಇತ್ತು, ಇಂದು ಮಸಾಜಿಗೆ ಮೈಹೊಡ್ಡಲು ಜಾನು ಬೇಕೆಂದು ತಿಳಿಸಿ ಆಕೆಯ ಬರುವಿಕೆಗಾಗಿಕಾದ ಜಾನ್. ಕಪ್ಪು ಸಮವಸ್ತ್ರ, ಕನ್ನಷ್ಟೇ ಕಾಣುವಂತೆ ಮುಖವನ್ನು ಮುಚ್ಚಿದ್ದ ಮಾಸ್ಕಧರಿಸಿ ಬಂದ ಜಾನು, ಕಂಡದ್ದು ನೆನ್ನೆಯ ಪ್ರೀತಿಯ ಕೇಳುಗ, ಮನಬಿಚ್ಚಿಮಾತನಾಡಿ ಮಗುವಾಗಿಸಿ ಮನ್ನಣೆಗಳಿಸಿದ್ದ ಗ್ರಾಹಕ. ಆಕೆ ಪರಿಚಯದ ನಗೆ ಬೀರಿ, ಉಭಯಕುಶಲೋಪರಿಸಾಂಪ್ರತ ಮಾತನಾಡಿಸಿದಳು. ಜಾನ್, ಆಕೆಗಾಗಿ ತಂದಿದ್ದ ಚಾಕಲೇಟ್, ಹೂಗುಚ್ಛ ನೀಡಿದ. ಆಕೆಗೆ ಅದು ಸ್ವರ್ಗ ಸುಖ! ಅಲ್ಲಿಯ ತನಕ ಗೋವಾದಲ್ಲಿ ಆಕೆ ನೋಡಿದ್ದ ಅದೆಷ್ಟೋ ಗ್ರಾಹಕರಿಗೆ ಅವಳೊಬ್ಬ ಸುಂದರಿ ಅಷ್ಟೇ, ಯಾರಿಂದಲೂ ಸವಿಮಾತು, ಸನ್ನಡತೆಯ ಸವಿಯನ್ನೇ ಸವಿಯದ ಜಾನು, ಜಾನ್ ನ ಈ ಪ್ರತಿಕ್ರಿಯೆಯಿಂದ ಸ್ವರ್ಗ ಸುಖದಲ್ಲಿ ತೆಲಾಡುತ್ತ ಕ್ಷಣಾರ್ಧ ಮೈಮರೆತಳು. ಜಾನ್ ನ ಈ ಪ್ರತಿಕ್ರಿಯೆಯಿಂದ ಜಾನುವಿನ ಕಣ್ಣಾವೆಗಳಲ್ಲಿ ಹರಿದದ್ದು ಆನಂದಬಾಷ್ಪ! ಕ್ಷಣಾರ್ಧದಲ್ಲಿ ತನ್ನ ವೃತ್ತಿಯ ಜವಾಬ್ದಾರಿ ಅರಿವಾಗಿ ಜಾನು ಮಸಾಜ್ ಮಾಡಲು ಸಜ್ಜಾದಳು, ಜಾನ್ ಇಂದು ಮಸಾಜ್ ಬೇಡವೆಂದು ತಿಳಿಸಿ, ಇಲ್ಲಿಗೆ ಬಂದದ್ದು ನಿಮ್ಮನ್ನು ಕಂಡು, ಶುಭಹಾರೈಕೆಯೊಂದ ತಿಳಿಸಿ ನಿಮ್ಮ ಬದುಕು ಬೆಳಕಾಗಲೆಂದು ಹಾರೈಸಲು, ರಿಸೆಪ್ಶನ್ ಅಲ್ಲಿ ಕಟ್ಟಿದ ಹಣ ನಿಮ್ಮನ್ನು ಕಾಣಲು ಅಷ್ಟೇ ಎಂದು ಆಕೆಯ ಕೈಗೊಂದಿಷ್ಟು ಹಣವನ್ನಿಟ್ಟು ಅದನ್ನು ಅಮ್ಮನಿಗೂ, ತಮ್ಮನ ವಿದ್ಯಾಭ್ಯಾಸಕ್ಕೂ ಬಳಸಬೇಕೆಂದು ತಿಳಿಸಿದ. ಆಗಂತುಕ ತೋರಿದ ಕಾಳಜಿಗೆ ಜಾನು ಕರಗಿಹೋಗಿದ್ದಳು, ಕಣ್ಣಷ್ಟೇ ಕಾಣುತಿದ್ದ ಆ ಮುಖದಲ್ಲಿ ಮಾನವತೆಯೊಂದಿಗೆ ಬೆರೆತ ಮಂದಹಾಸವಿತ್ತು. ಜಾನ್, ಜಾನುವಿನ ಭವಿಷ್ಯಕ್ಕೆ ಬಂಗಾರದಂತಹ ಶುಭಕಾಮನೆಗಳ ತಿಳಿಸಿ ಮೆಟ್ಟಿಲಿಳಿದು ಮರೆಯಾಗಿದ್ದ…
 
ನಮ್ಮ ನಿಮ್ಮೆಲ್ಲರ ದಿನಚರಿಗಳಲ್ಲಿ, ಓಡಾಡುವ ಸ್ಥಳಗಳಲ್ಲಿ ಅದೆಷ್ಟೋ ಮಹಿಳಾ ಕಾರ್ಮಿಕರ, ಉದ್ಯೋಗಿಗಳ ಒಡನಾಟ ಇದ್ದದ್ದೇ, ಇವರಲ್ಲಿ ಬಹುಪಾಲು ಬಡ-ಮಧ್ಯಮ ವರ್ಗದ ಮಹಿಳೆಯರೇ ಹೆಚ್ಚು, ಅವರಲ್ಲಿ ಹಲವರ ವೃತ್ತಿ, ಕೆಲಸ ಆ ಹೆಣ್ಣುಮಕ್ಕಳ ಪರಿಸ್ಥಿತಿ ಮತ್ತು ಬದುಕಿನ ಅವಶ್ಯಕತೆಯೇ ವಿನಃ, ಅದು ಅವರ ಆಯ್ಕೆಯಾಗಿರುವುದಿಲ್ಲ. ಅವುಡುಗಚ್ಚಿ, ಮನಸ್ಸಿನ ಭಾರವನ್ನೆಲ್ಲ ಮರೆತು ಮಂದಹಾಸನೀಡುತ್ತಾ ದುಡಿಯುತ್ತಿರುತ್ತಾರೆ. ಅಂತಹ ಮಹಿಳಾ ಕಾರ್ಮಿಕರು ಎದುರಾದಾಗ ನಾವು-ನೀವೆಲ್ಲ ಮಂದಹಾಸದ ಮುಗುಳುನಗೆಯೊಂದ ಬೀರಿ ಗೌರವಿಸೋಣ. ಒಮ್ಮೆ ಯೋಚಿಸಿ ಜಾನು ನಮ್ಮ-ನಿಮ್ಮೆಲರ ನಡುವೆಯೂ ಇರಬಹುದು.
 
ಕೊನೆಯದಾಗಿ, ಓದುಗರ ಭಾವದಲ್ಲಿ ಜಾನುವಿನ ಕಥೆ ಇಷ್ಟೇನಾ ಎನ್ನುವ ಪ್ರಶ್ನೆಯೂ ಮೂಡಬಹುದು, ಆದರೆ ಆಕೆಗಿದ್ದ ಸಮಯ ಮತ್ತು ವೃತ್ತಿಯ ಜವಾಬ್ದಾರಿಗಳ ನಡುವೆ ಒಬ್ಬ ಹೆಣ್ಣುಮಗಳು ಅಪರಿಚಿತನೊಂದಿಗೆ ಎಷ್ಟು ಮಾತಾಗಬಹುದು, ಎನ್ನುವ ಇತಿಮಿತಿಯಲ್ಲಿ ಈ ಕಥೆಸಾಗಿದೆ. ಜಾನುವಿನ ಭವಿಷ್ಯಕ್ಕೆ ಭದ್ರ ಭೂನಾದಿ ಹಾಕಬೇಕೆಂಬ ಕನಸುಗಳೊಂದಿಗೆ ಜಾನ್ ಮಾತುಮುಗಿಸಿದ್ದ, ನಾನು ಕಾದಿದ್ದೇನೆ ಜಾನುವಿನ ಮುಂದಿನಕಥೆ ನಿಮ್ಮಮುಂದೆ ತೆರೆದಿಡಲು.

Thursday, March 14, 2024

ಅರಿತು ಹಂಚೋಣ

ಬದಲಾಗದಿದ್ದರೆ ಬಡವಾದೆವು
ಕಲಿಯದಿದ್ದರೆ ಜಡವಾದೆವು
ಓದಿ-ಬರೆಯದಿದ್ದರೆ ಬರಡಾದೆವು
ಅರಿಯದಿದ್ದರೆ ಅಂಧರಾದೆವು
ದುಡಿಯದಿದ್ದರೆ ದುಃಖಿತರಾದೆವು
 
ಕುಳಿತು ಕುಬ್ಜನಾಗುವ ಬದಲು, ನಿಂತು ನೆರಳಾಗು
ನಿಂತು ನರಳುವ ಬದಲು, ನಡೆದು ನೆಲೆಯಾಗು
ಕೂತು ಕೊರಗುವ ಬದಲು, ಕಲಿತು ಕಲೆಯಾಗು
ಕಲಿತದ್ದ ಕೊಳೆಸುವ ಬದಲು, ತಿಳಿಸಿ ತಿಳಿಯಾಗು
ಸುತ್ತಲಿದ್ದವರ ಸೋಲಿಸುವ ಬದಲು, ಸ್ಫೂರ್ತಿಯಲಿ ನೀ ಗುರುವಾಗು

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...