Wednesday, November 20, 2024

ಜವಬ್ದಾರಿ

ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು
ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು
ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು

ಬರಹ, ಬೇಗುದಿ...!

ನೋವಿಗಿಷ್ಟು, ನಲಿವಿಗಿಷ್ಟು,
ನೆನೆದ ನೆತ್ತರಿಗಿಷ್ಟು,
ಕರಗಿದ ಕಣ್ಣಿರಿಗೂ ಇಷ್ಟು ಬರಹ...! 

ಮಾತು ಮರೆತು, ಭಾವ ಬರೆದು,
ಏಕಾಂತದಿ ಎದ್ದು,
ಬಸಿಯಬೇಕಿದೆ ಮನದ ಬೇಗುದಿ...!

Sunday, July 28, 2024

ರೈತ ಮಕ್ಕಳೇ...

ಬನ್ನಿ ನನ್ನೂರಿಗೆ
ಸ್ವರ್ಗದ ತವರಿಗೆ
ಗಿಡವೊಂದು ಮರವಾಗೆ
ಕಾಳೊಂದು ತೆನೆಯಾಗೆ
ದೇಶಕನ್ನವ ನೀಡುವಲ್ಲಿಗೆ

ಇಲ್ಲಿ, ರಾಗ ದ್ವೇಷಗಳುಂಟು
ಪ್ರೀತಿ ಪ್ರೇಮಗಳುಂಟು
ನೆನಪುಗಳುಂಟು
ನೀವಿಟ್ಟ ಹೆಜ್ಜೆಗುರುತುಗಳುಂಟು
ಆದರಿಸುವ ಭುಜಬಲಗಳುಂಟು

ಬೆಂದ ಬೇಗೆಯಲಿ
ನೊಂದು ನಲಿಯುತಲಿ
ಮೆಟ್ಟ ಊರಲ್ಲಿ ಒಂಟಿ ಅಲೆಯುತಲಿ
ನಿಮ್ಮ ಮನ ಸುಡುದಿರಲಿ
ಕಾದಿಹುದು ನಿಮ್ಮ ನೆಲವಿಲ್ಲಿ

ಬನ್ನಿ ನನ್ನೂರಿಗೆ
ಸ್ವರ್ಗದ ತವರಿಗೆ...

- ಪ್ರಸಾದ್ ಟಿ ಎಮ್

Thursday, March 14, 2024

ಅರಿತು ಹಂಚೋಣ

ಬದಲಾಗದಿದ್ದರೆ ಬಡವಾದೆವು
ಕಲಿಯದಿದ್ದರೆ ಜಡವಾದೆವು
ಓದಿ-ಬರೆಯದಿದ್ದರೆ ಬರಡಾದೆವು
ಅರಿಯದಿದ್ದರೆ ಅಂಧರಾದೆವು
ದುಡಿಯದಿದ್ದರೆ ದುಃಖಿತರಾದೆವು
 
ಕುಳಿತು ಕುಬ್ಜನಾಗುವ ಬದಲು, ನಿಂತು ನೆರಳಾಗು
ನಿಂತು ನರಳುವ ಬದಲು, ನಡೆದು ನೆಲೆಯಾಗು
ಕೂತು ಕೊರಗುವ ಬದಲು, ಕಲಿತು ಕಲೆಯಾಗು
ಕಲಿತದ್ದ ಕೊಳೆಸುವ ಬದಲು, ತಿಳಿಸಿ ತಿಳಿಯಾಗು
ಸುತ್ತಲಿದ್ದವರ ಸೋಲಿಸುವ ಬದಲು, ಸ್ಫೂರ್ತಿಯಲಿ ನೀ ಗುರುವಾಗು

Tuesday, February 27, 2024

ಅಪ್ಪ

ನಿಮ್ಹೆಗಲೇ ನನ್ನಾಸನ 
ನಿಮ್ಮೆದೆಯೇ ನನ್ಹಾಸಿಗೆ 
ನಿಮ್ಮಾಸೆ ಕಣ್ಗಳೇ ನನ ಭವಿಷ್ಯ
ನೀವಿತ್ತ ಅರಿವಿನಕ್ಷರ ನನ ಅಕ್ಷಿ
ನೀವ್ ಮೆಟ್ಟಿದ ಮಣ್ಣೇ ನನ ಮಾತೆ
ನಿಮ್ಮ ಬವಣೆಯ ಬೆವರೇ ನನ ಬದುಕು
ನೀವ್ ನಡೆದ ದಾರಿಯೇ ನನ ಗುಡಿ ಗೋಪುರ
ನನ್ನರಿವಿನ ಅನಂತತೆಯಲಿ ನೀವ್ ಅಮರ... ಅಮರ...

Wednesday, January 31, 2024

ಸ್ವತಂತ್ರರರೋ... ಅತಂತ್ರರೋ…

ದೇಶದ ಬೆನ್ನೆಲುಬು ಎನಿಸಿಕೊಂಡವರು
ಎಲ್ಲರ ಮುಂದೆ ಬೆನ್ನಬಾಗಿಸಿದವರು
ಚಿನ್ನದ ಬೆಳೆ ಬೆಳೆದು ಬಿಡಿಗಾಸಿಗೆ ಮಾರುವವರು
ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯಲಾರದ ಕನಿಷ್ಠರು
ಮಧ್ಯವರ್ತಿಗಳಿಂದ ಮಾರಣ ಹೋಮವಾದವರು

ವರುಷವೆಲ್ಲ ಬೆಳೆದು ಒಪ್ಪತ್ತಿನ ಗಂಜಿಗೂ ಸಂಪಾದಿಸರಾದವರು
ಅಕ್ಷರಗಳಷ್ಟೆ ಅಕ್ಕರೆಯಾದವರು
ಹೆಜ್ಜೆಹೆಜ್ಜೆಗೂ ತುಳಿಯಲ್ಪಟ್ಟವರು
ವ್ಯವಸಾಯ ಮಾಡಬೇಕೇ ಎಂದು ಕೊರಗಿ ಕುಂತವರು
ನಾವು ಯಾರಿಗೂ ಬೇಡದ ರೈತರು!!!

Thursday, January 4, 2024

ಅರಿವಿನಾನಂದ ಪಡೆಯುತಿರಲಿ

ಕಲಿತು ಮಾಡಿದ ಸಾಧನೆ 'ಕುಲ' ಬೆಳಗಿಸಲಿ
ಕಲಿತದ್ದು ಕೊಂಬಾಗಿ ಕೊಲ್ಲದಿರಲಿ
ಗರ್ವದಲಿ ಮನ ಮೆರೆದು ಮುಳುವಾಗದಿರಲಿ
ಈ ಮನ, ಅರಿವಿನಾನಂದ ಪಡೆಯುತಿರಲಿ
ಅರಿತರಿತು ಅನಂತತೆಯಡೆಗೆ ಸಾಗುತಿರಲಿ

Wednesday, January 3, 2024

ಬದುಕಲಿಸಿರಲು

ನೋವಿಷ್ಟು, ನಲಿವಿಷ್ಟು
ಕಲಿತರಿತದ್ದು ಬೊಗಸೆಯಷ್ಟು
ಖುಷಿಕೊಟ್ಟ ಕೃಷಿ
ಗಟ್ಟಿಮಾಡಿದ ಅಪ್ಪನಾನಾರೋಗ್ಯ
ಕೊಂಚ ಬಲಿತ ಬರಹ
ಬರೆದೆರಡು ಪುಸ್ತಕ, ಬದುಕಲಿಸಿರಲು

ನಾನೆಟ್ಟ ಮರ

ನಾನೆಟ್ಟ ಮರ,
ಪ್ರೀತಿಯಲಿಟ್ಟ ಗೊಬ್ಬರ,
ಸುಳಿ ಕೊಳೆ ರೋಗಕ್ಕೆ ತತ್ತರ,
ಇಂದದಕೆ ಕೊಡಲಿಯೇ ಆದಾರ

ಜವಬ್ದಾರಿ

ಜವಬ್ದಾರಿಗಳೆಂಬ ಜಾತ್ರೆಯಲಿ ಕಳೆದುಹೋದವರು ನಾವು ಹಬ್ಬವೋ, ಹರಕೆಯೋ ಕರ್ತವ್ಯದ ಕರೆಗಂಟೆ ಬಾರಿಸುವವರು ನಾವು ಜಾತ್ರೆಯೂ ಜಗಮರೆಸಲಾರದ ಜಟಿಲರು ನಾವು